
ಇಡೀ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಲಬುರಗಿಯಲ್ಲಿ ಫಜಲ್ ಭಗವಾನ್ ಎಂಬಾತ ಚಾಕು ಹಿಡಿದು ಬೆದರಿಸಿದ ಘಟನೆ ಭಾನುವಾರ ಸಂಜೆ ನಡೆದಿದೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿ ನಿಯಂತ್ರಿಸಿದರು. ಜನರ ಕಡೆಗೆ ಅಪಾಯಕಾರಿಯಾಗಿ ಚಾಕುವನ್ನು ಪ್ರಯೋಗಿಸುತ್ತಿದ್ದ ಫಜಲ್ ಎಂಬಾತ ಸ್ಥಳದಲ್ಲಿದ್ದ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಆಯುಧ ಬಿಟ್ಟು ಶರಣಾಗುವಂತೆ ಪೊಲೀಸರು ಪದೇ ಪದೇ ಎಚ್ಚರಿಕೆ ನೀಡುತ್ತಿದ್ದರು.
ಪೊಲೀಸರು ನೀಡಿದ ಎಚ್ಚರಿಕೆಗೆ ಆರೋಪಿ ಫಜಲ್ ಕಿಮ್ಮತ್ತು ನೀಡಿರಲಿಲ್ಲ. ಕೊನೆಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಫಜಲ್ ಮೇಲೆ ಗುಂಡು ಹಾರಿಸಬೇಕಾಯಿತು. ಆರೋಪಿಯ ಕಾಲಿಗೆ ಗುಂಡು ತಗುಲಿದ್ದು, ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಕಲಬುರಗಿ ನಗರದ ಚೌಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.