ತಿರುಪತಿ: ತಿರುಪತಿ ಮೃಗಾಲಯದಲ್ಲಿ ಗುರುವಾರ ಸಿಂಹದೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ಕೊಂದು ಹಾಕಿದ ಘಟನೆ ನಡೆದಿದೆ.
ರಾಜಸ್ಥಾನದ ಅಲ್ವಾರ್‌ನ 38 ವರ್ಷದ ಪ್ರಹ್ಲಾದ್ ಗುಜ್ಜರ್ ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಅವರು ಸಾರ್ವಜನಿಕರಿಗೆ ನಿಷೇಧ ಇರುವ ಪ್ರದೇಶವನ್ನು ಪ್ರವೇಶಿಸಿದರು. ಎಚ್ಚರಿಕೆಯನ್ನು ನಿರ್ಲಕ್ಷಿಸಿ 25 ಅಡಿ ಎತ್ತರದ ಬೇಲಿಯನ್ನು ಹತ್ತಿ ಆವರಣಕ್ಕೆ ಹಾರಿದರು. ಸಿಂಹಗಳಿದ್ದ ಆವರಣದೊಳಗೆ ಪ್ರವೇಶಿಸಿ ಸಿಂಹದೊಂದಿಗೆ ಫೋಟೋ ತೆಗೆಯಲು ಪ್ರಹ್ಲಾದ್ ಪ್ರಯತ್ನಿಸಿದ್ದಾರೆ ಎಂದು ಶ್ರೀ ವೆಂಕಟೇಶ್ವರ ಝೂಲಾಜಿಕಲ್ ಪಾರ್ಕ್‌ನ ಅಧಿಕಾರಿಗಳು ತಿಳಿಸಿದ್ದಾರೆ.
ಕಾವಲುಗಾರ ಬರುವಷ್ಟರಲ್ಲಿ ಡೊಂಗಲ್‌ಪುರ ಎಂಬ ಹೆಸರಿನ ಸಿಂಹವು ಗುಜ್ಜರ್ ನನ್ನು ಕೊಂದು ಹಾಕಿತು. ಪೊಲೀಸ್ ಕೇಸ್ ದಾಖಲಾಗಿದ್ದು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದ್ದು, ಗುಜ್ಜರ್ ಆವರಣಕ್ಕೆ ಪ್ರವೇಶಿಸಿದಾಗ ಕುಡಿದ ಸ್ಥಿತಿಯಲ್ಲಿದ್ದನೆ ಎಂಬುದರ ಬಗ್ಗೆ ತನಿಖೆ ನಡೆಸಲಾಗಿದೆ. ಗುಜ್ಜರ್ ಒಬ್ಬನೇ ಮೃಗಾಲಯಕ್ಕೆ ಭೇಟಿ ನೀಡಿದ್ದು, ಅಧಿಕಾರಿಗಳು ಆತನ ಕುಟುಂಬವನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ.
ಮೃಗಾಲಯದಲ್ಲಿ ಕುಮಾರ್, ಸುಂದರಿ ಮತ್ತು ಡೊಂಗಲ್ಪುರ್ ಹೆಸರಿನ ಮೂರು ಸಿಂಹಗಳಿವೆ. ಡೊಂಗಲ್‌ಪುರ ಸಿಂಹವನ್ನು ಪಂಜರಕ್ಕೆ ಸ್ಥಳಾಂತರಿಸಲಾಗಿದ್ದು, ನಿಗಾದಲ್ಲಿ ಇರಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.