ಸಿಹಿ ತಿನ್ನಬೇಕು ಅನಿಸಿದಾಗ ಒಮ್ಮೆ ಈ ಗೋಧಿಹಿಟ್ಟಿನ ಹಲ್ವಾ ಮಾಡಿಕೊಂಡು ಸವಿಯಿರಿ. ಇದನ್ನು ಮಾಡುವುದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತೆ. ಆದರೆ ತಿನ್ನುವುದಕ್ಕೆ ರುಚಿಕರವಾಗಿರುತ್ತದೆ.
ಗೋಧಿ ಹಿಟ್ಟು ½ ಕಪ್, ಸಕ್ಕರೆ-1 ಕಪ್, ತುಪ್ಪ-1 ¼ ಕಪ್, ಏಲಕ್ಕಿ ಪುಡಿ-1/4 ಟೀ ಸ್ಪೂನ್, ಗೋಡಂಬಿ-1 ಟೇಬಲ್ ಸ್ಪೂನ್, ಬಿಸಿ ನೀರು-1 ಕಪ್, ಆರೇಂಜ್ ಫುಡ್ ಕಲರ್-ಚಿಟಿಕೆ.
ಮೊದಲಿಗೆ ಒಂದು ಅಗಲವಾದ ಬೌಲ್ ಗೆ ಗೋಧಿ ಹಿಟ್ಟು ಹಾಕಿ ಅದಕ್ಕೆ ಸ್ವಲ್ಪ ಸ್ವಲ್ಪ ನೀರು ಸೇರಿಸಿಕೊಂಡು ಚಪಾತಿ ಹಿಟ್ಟಿನ ರೀತಿ ನಾದಿಕೊಳ್ಳಿ. ಇದು ಸ್ವಲ್ಪ ಗಟ್ಟಿಯಾಗಿರಲಿ. ನಂತರ ಇದನ್ನು 1 ಕಪ್ ಬಿಸಿ ನೀರಲ್ಲಿ 7 ಗಂಟೆಗಳ ಕಾಲ ನೆನೆಸಿಡಿ. ನಂತರ ಇದನ್ನು ನೀರಿನಲ್ಲಿ ಚೆನ್ನಾಗಿ ಕರಗುವವರೆಗೆ ಮಿಕ್ಸ್ ಮಾಡಿಕೊಂಡು ಇದನ್ನು ಸೋಸಿಕೊಳ್ಳಿ.
ಒಂದು ದಪ್ಪ ತಳದ ಪಾತ್ರೆ ತೆಗೆದುಕೊಂಡು ಅದಕ್ಕೆ ಸಕ್ಕರೆ ¼ ಕಪ್ ನೀರು ಹಾಕಿ ಒಂದೆಳೆ ಪಾಕ ಬರುವವರೆಗೆ ಕಾಯಿಸಿಕೊಳ್ಳಿ. ಇದಕ್ಕೆ ಸೋಸಿ ಇಟ್ಟುಕೊಂಡ ಗೋಧಿಹಿಟ್ಟಿನ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಇದು ಸ್ವಲ್ಪ ದಪ್ಪಗಾಗುತ್ತಿದ್ದಂತೆ ಇದಕ್ಕೆ ತುಪ್ಪ ಸೇರಿಸಿ ಮತ್ತೆ ಮಿಕ್ಸ್ ಮಾಡಿ. ಹೀಗೆ ತುಪ್ಪ ಸೇರಿಸುತ್ತಾ ಚೆನ್ನಾಗಿ ಮಿಕ್ಸ್ ಮಾಡುತ್ತಾ ಇರಿ. ಈ ಮಿಶ್ರಣ ತಳಬಿಡುವವರಗೆ ಕೈಯಾಡಿಸಿ. ನಂತರ ಗ್ಯಾಸ್ ಆಫ್ ಮಾಡಿ ತುಪ್ಪದಲ್ಲಿ ಕರಿದ ಗೋಡಂಬಿ, ಏಲಕ್ಕಿ ಪುಡಿ ಸೇರಿಸಿ ಮಿಕ್ಸ್ ಮಾಡಿ ಸವಿದು ನೋಡಿ.