
ಕೋಲಾರ: ತನ್ನನ್ನು ಬಿಟ್ಟು ಪ್ರಿಯಕರನೊಂದಿಗೆ ಪತ್ನಿ ವಾಸವಾಗಿದ್ದನ್ನು ಸಹಿಸದ ಪತಿರಾಯ ಆಕೆಯ ತವರು ಮನೆಯವರೊಂದಿಗೆ ಸೇರಿ ಪ್ರಿಯಕರನನ್ನು ಕೊಲೆ ಮಾಡಿದ್ದಾನೆ.
ಕೋಲಾರ ಜಿಲ್ಲೆ ಬಂಗಾರಪೇಟೆಯಲ್ಲಿ ಘಟನೆ ನಡೆದಿದೆ. ಮದುವೆಯಾಗಿ ಎರಡು ವರ್ಷ ಸಂಸಾರ ನಡೆಸಿದ ಪತ್ನಿ ಆಶಾ ಗಂಡ ಭರತ್ ನನ್ನು ಬಿಟ್ಟು ಒಂಟಿಯಾಗಿದ್ದ ಹಳೆ ಪ್ರಿಯಕರ ಹೇಮಂತ್ ನೊಂದಿಗೆ ವಾಸವಾಗಿದ್ದಳು. ಇದನ್ನು ಸಹಿಸದ ಪತಿ ಪತ್ನಿಯ ತವರು ಮನೆಯವರೊಂದಿಗೆ ಸೇರಿ ಪ್ರಿಯಕರನನ್ನು ಕೊಲೆ ಮಾಡಿದ್ದಾನೆ.
ಬಂಗಾರಪೇಟೆಯ ಹೇಮಂತ್ ಕೊಲೆಯಾದ ವ್ಯಕ್ತಿ. ಅವರ ತಂದೆ ಕೃಷ್ಣಪ್ಪ ಪುತ್ರ ನಾಪತ್ತೆಯಾದ ಬಗ್ಗೆ ದೂರು ನೀಡಿದ್ದರು. ಅಕ್ಟೋಬರ್ 15ರಂದು ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗಿದ್ದ ಪುತ್ರ ಮನೆಗೆ ವಾಪಸ್ ಬಂದಿರಲಿಲ್ಲ. ಹುಡುಕಾಟ ನಡೆಸಿದ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ.
ಹೇಮಂತ್ ನನ್ನು ಅಪಹರಿಸಿದ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಬೆಂಗಳೂರಿನ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ಶವ ಪತ್ತೆಯಾಗಿದ್ದು, ಗುರುತು ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರೇ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ, ಮಾಹಿತಿ ತಿಳಿದ ಬಂಗಾರಪೇಟೆ ಪೊಲೀಸರು ಯಲಹಂಕ ಪೊಲೀಸರನ್ನು ಸಂಪರ್ಕಿಸಿದ್ದಾರೆ.
ಬಟ್ಟೆ, ಇನ್ನಿತರೆ ವಸ್ತುಗಳನ್ನು ಪರಿಶೀಲಿಸಿದ ಹೇಮಂತ್ ಕುಟುಂಬದವರು ದೃಢಪಡಿಸಿದ್ದಾರೆ. ನಂತರ ಪೊಲೀಸರಿಗೆ ಅಪಹರಣ ಮಾಡಿ ಕೊಲೆ ಮಾಡಿರುವುದು ಗೊತ್ತಾಗಿದೆ. ತನಿಖೆ ಮುಂದುವರೆಸಿದಾಗ ಹೇಮಂತ್ ಗೆ ಮದುವೆಯಾಗಿದ್ದು, ಒಂದು ವರ್ಷ ಸಂಸಾರ ನಡೆಸಿ ಪತ್ನಿಗೆ ವಿಚ್ಛೇದನ ನೀಡಿ ಏಕಾಂಗಿಯಾಗಿದ್ದ ಎನ್ನುವುದು ಗೊತ್ತಾಗಿದೆ.
ಹಳೆಯ ಪ್ರಿಯತಮೆ ಆಶಾ ಜೊತೆಗೆ ಹೇಮಂತ್ ಬೆಂಗಳೂರಿನ ಶ್ರೀರಾಮಪುರದಲ್ಲಿ ಮನೆ ಮಾಡಿ ಸಂಸಾರ ನಡೆಸುತ್ತಿದ್ದ. ಆಶಾ ಸಂಬಂಧಿ ಭರತ್ ಜೊತೆಗೆ ಮದುವೆಯಾಗಿ ಎರಡು ವರ್ಷ ಸಂಸಾರ ನಡೆಸಿದ್ದಳು. ನಂತರ ಆತನನ್ನು ಬಿಟ್ಟು ಹೇಮಂತ್ ಜೊತೆಗೆ ವಾಸವಾಗಿದ್ದಳು.
ಆಕೆಗಾಗಿ ಮನೆಯವರು ಹುಡುಕಾಟ ನಡೆಸಿದಾಗ ಹಳೆಯ ಪ್ರಿಯಕರ ಹೇಮಂತ್ ಜೊತೆಗೆ ಇರುವುದು ಗೊತ್ತಾಗಿದೆ. ಹೀಗಾಗಿ ಹೇಮಂತ್ ನನ್ನು ಅಪಹರಿಸಿ, ಕೊಲೆ ಮಾಡಲಾಗಿದೆ. ಆಶಾ ಪತಿ ಭರತ್, ಆಕೆಯ ತಾಯಿ ಪುಷ್ಪಾ, ತಮ್ಮ ಶ್ರೀಕಾಂತ್, ಭರತ್ ಸ್ನೇಹಿತರಾದ ಸುದರ್ಶನ್, ಆನಂದ್, ಪ್ರಶಾಂತ್ ಸೇರಿದಂತೆ 8 ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.