ಮುಂಬೈ: ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ವಿವಾದ ಸೃಷ್ಟಿಸಿದ್ದ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಕೆಲಸದ ಅವಧಿ ಅವರವರ ವಿವೇಚನೆಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ.
ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಯಾರೂ ದೀರ್ಘಾವಧಿ ಕೆಲಸ ಮಾಡಿ ಎಂದು ಹೇಳಲು ಸಾಧ್ಯವಿಲ್ಲ. ಅದು ಅವರ ವಿವೇಚನೆಗೆ ಬಿಟ್ಟಿದ್ದಾಗಿದೆ. ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
40 ವರ್ಷ ನಾನು ವಾರಕ್ಕೆ 70 ಗಂಟೆ ಕೆಲಸ ಮಾಡಿದ್ದೇನೆ. ಬೆಳಗ್ಗೆ 6.30ಕ್ಕೆ ಆಫೀಸಿಗೆ ಹೋಗುತ್ತಿದ್ದೆ. ರಾತ್ರಿ 8:30ಕ್ಕೆ ಮರಳುತ್ತಿದ್ದೆ. ಇದು ಚರ್ಚೆಯ ಮತ್ತು ಚರ್ಚಿಸಬೇಕಾದ ವಿಷಯವಲ್ಲ. ಒಬ್ಬರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ವಿಷಯವಾಗಿದೆ. ಕೆಲವರು ತೀರ್ಮಾನಕ್ಕೆ ಬರಬಹುದು, ಅವರು ಏನು ಬೇಕಾದರೂ ಮಾಡಬಹುದು. ದೀರ್ಘಾವಧಿ ಕೆಲಸ ಅವರವರ ವಿವೇಚನೆಗೆ ಬಿಟ್ಟಿದ್ದಾಗಿದೆ. ಅದನ್ನು ಮಾಡಬೇಕು, ಇದನ್ನು ಮಾಡಬೇಕು ಎಂದು ಹೇಳುವವರು ಯಾರೂ ಇಲ್ಲ ಎಂದು ಹೇಳಿದ್ದಾರೆ.