ಬೀದರ್: ಕೃಷಿಯೇತರ ಜಮೀನಿನ ನಿವೇಶನಗಳ ಮಾರಾಟದ ಅನುಮತಿಗೆ 10 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸೇರಿದಂತೆ ಮೂವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶ್ರೀಕಾಂತ್, ಸದಸ್ಯ ಚಂದ್ರಕಾಂತ ರೆಡ್ಡಿ ಮತ್ತು ಅವರ ಆಪ್ತ ಸಿದ್ದು ಹೂಗಾರ ಎಂಬುವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬೀದರ್ ನಗರದ ಚಿಕ್ಕಪೇಟೆಯಲ್ಲಿ ಕೃಷಿಯೇತರ ಜಮೀನಿನ ಶೇಕಡ 60ರಷ್ಟು ನಿವೇಶನಗಳ ಬಿಡುಗಡೆ ಮಾಡಿ ಅವುಗಳ ಮಾರಾಟಕ್ಕೆ ಅನುಮತಿ ನೀಡಲು ಶ್ರೀಕಾಂತ್ ಹಾಗೂ ಚಂದ್ರಕಾಂತ್ ಅವರು 50 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದರ ಅನ್ವಯ 10 ಲಕ್ಷ ರೂ. ಮುಂಗಡ ಕೊಡುವ ಬಗ್ಗೆ ಒಪ್ಪಂದವಾಗಿದೆ. ಬೀದರ್ ನ ಪ್ರತಾಪ ನಗರದಲ್ಲಿ ಶ್ರೀಕಾಂತ್ ಹಾಗೂ ಚಂದ್ರಕಾಂತ್ ಅವರ ಆಪ್ತ ಸಿದ್ದು ಹೂಗಾರ 10 ಲಕ್ಷ ರೂಪಾಯಿ ಪಡೆಯುತ್ತಿದ್ದಾಗ ದಾಳಿ ನಡೆಸಿ ವಶಕ್ಕೆ ಪಡೆಯಲಾಗಿದೆ. ನಂತರ ಶ್ರೀಕಾಂತ್ ಮತ್ತು ಚಂದ್ರಕಾಂತ್ ಅವರನ್ನು ಕೂಡ ವಶಕ್ಕೆ ಪಡೆದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮಿ ಸತೀಶ್ ನೌಬಾದೆ ಈ ಕುರಿತು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಲೋಕಾಯುಕ್ತ ಎಸ್ಪಿ ಉಮೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.