ಬಾಗಲಕೋಟೆ: ಲೋಕಾಯುಕ್ತ ಪ್ರಕರಣದಲ್ಲಿ ಸುಳ್ಳು ಸಾಕ್ಷಿ ಹೇಳಿದ ವ್ಯಕ್ತಿಗೆ ಎರಡು ವರ್ಷ ಸಾದಾ ಶಿಕ್ಷೆ, 10,000 ರೂ. ದಂಡ ವಿಧಿಸಿ ಬಾಗಲಕೋಟೆ ಪ್ರಧಾನ ಸಿಜೆಎಂ ನ್ಯಾಯಾಲಯ ಆದೇಶಿಸಿದೆ.
ಶಶಿಕಾಂತ ಹಡಗಲಿ ಶಿಕ್ಷೆಗೆ ಒಳಗಾದ ವ್ಯಕ್ತಿ. ತನ್ನ ತಾಯಿಗೆ ಬರಬೇಕಾದ ಪರಿಹಾರದ ಹಣ 10,000 ರೂ. ಮಂಜೂರು ಮಾಡಲು ಹುನಗುಂದ ಸಿಡಿಪಿಓ ಕಚೇರಿಯ ಎಫ್.ಡಿ.ಎ. ಗೋಪಾಲ ಹೆರಕಲ್ ಒಂದು ಸಾವಿರ ರೂಪಾಯಿ ಲಂಚ ಕೊಡುವಂತೆ ಕೇಳಿದ್ದರು ಎಂದು ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದರು.
ಗೋಪಾಲ ಒಂದು ಸಾವಿರ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಲೋಕಾಯುಕ್ತ ವಿಶೇಷ ನ್ಯಾಯಾಲಯದ ವಿಚಾರಣೆಯ ಸಂದರ್ಭದಲ್ಲಿ ದೂರುದಾರ ಶಶಿಕಾಂತ ಪರಿಹಾರ ಹಣ ಮಂಜೂರಿಗೆ ಗೋಪಾಲ ಯಾವುದೇ ಲಂಚ ಕೇಳಿಲ್ಲ. ಲೋಕಾಯುಕ್ತ ಪೊಲೀಸರು ಒಂದು ಬಿಳಿ ಹಾಳೆಯ ಮೇಲೆ ಸಹಿ ಪಡೆದಿದ್ದಾರೆ ಎಂದು ಸುಳ್ಳು ಸಾಕ್ಷಿ ಹೇಳಿದ್ದಾರೆ.
ಇದು ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಶಶಿಕಾಂತ ವಿರುದ್ಧ ದೂರು ದಾಖಲಿಸಲಾಗಿತ್ತು. ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಪಲ್ಲವಿ ಆರ್. ಅವರು 10 ವರ್ಷ ಜೈಲು ಶಿಕ್ಷೆ, ದಂಡ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕರಾದ ಎಂ.ಕೆ. ಪಾಟೀಲ ಮತ್ತು ಎಂ.ಸಿ. ಮಸಳಿ ಅವರು ವಾದ ಮಂಡಿಸಿದ್ದರು.