ಖ್ಯಾತ ಆಟಗಾರ ಲಿಯೋನೆಲ್ ಮೆಸ್ಸಿ ಪ್ರಸಕ್ತ ಋತುವಿನ ಕೊನೆಯಲ್ಲಿ ಪ್ಯಾರಿಸ್ ಸೇಂಟ್ ಜರ್ಮೈನ್ ಕ್ಲಬ್ ಅನ್ನು ತೊರೆಯಲಿದ್ದಾರೆ ಎಂದು ಮ್ಯಾನೇಜರ್ ಕ್ರಿಸ್ಟೋಫ್ ಗಾಲ್ಟಿಯರ್ ಖಚಿತಪಡಿಸಿದ್ದಾರೆ. ಮೆಸ್ಸಿ ಪಿ ಎಸ್ ಜಿ ಗಾಗಿ 74 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 32 ಗೋಲುಗಳನ್ನು ಗಳಿಸಿದ್ದಾರೆ. ಲೀಗ್ 1 ರಲ್ಲಿ, ಪ್ಯಾರಿಸ್ ಸೇಂಟ್-ಜರ್ಮೈನ್ ಪರ 37 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಅವರು 27 ಪಂದ್ಯಗಳನ್ನು ಗೆದ್ದಿದ್ದು, ಆರರಲ್ಲಿ ಸೋತಿದ್ದಾರೆ ಮತ್ತು ನಾಲ್ಕು ಪಂದ್ಯಗಳು ಡ್ರಾ ಆಗಿವೆ.
2021 ರಲ್ಲಿ ಮೆಸ್ಸಿ ಬಾರ್ಸಿಲೋನಾವನ್ನು ತೊರೆದ ನಂತರ ಪಿ ಎಸ್ ಜಿ ಎರಡು ವರ್ಷಗಳ ಹಿಂದೆ ಮೆಸ್ಸಿ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಇದೀಗ ಪಿ ಎಸ್ ಜಿ ಯೊಂದಿಗಿನ ಒಪ್ಪಂದವು ಈ ಋತುವಿನಲ್ಲಿ ಕೊನೆಗೊಳ್ಳುತ್ತದೆ.
ಶನಿವಾರ ಕ್ಲರ್ಮಾಂಟ್ ಫೂಟ್ ವಿರುದ್ಧ ಪಿ ಎಸ್ ಜಿ (ಪ್ಯಾರಿಸ್ ಸೇಂಟ್ ಜರ್ಮೈನ್) ಗಾಗಿ ತಮ್ಮ ಅಂತಿಮ ಪಂದ್ಯವನ್ನು ಆಡಲಿದ್ದಾರೆ.
ಸ್ಪ್ಯಾನಿಷ್ ಲಾ ಲಿಗಾ ಫುಟ್ಬಾಲ್ ಸ್ಪರ್ಧೆಯಲ್ಲಿ, ಲಿಯೋನೆಲ್ ಮೆಸ್ಸಿ 520 ಪಂದ್ಯಗಳಲ್ಲಿ 474 ಗೋಲುಗಳನ್ನು ಗಳಿಸಿದ್ದಾರೆ. ಫ್ರೆಂಚ್ ಲೀಗ್ 1 ರಲ್ಲಿ, ಮೆಸ್ಸಿ 57 ಪಂದ್ಯಗಳಲ್ಲಿ 22 ಗೋಲುಗಳನ್ನು ಗಳಿಸಿದ್ದಾರೆ. 35 ವರ್ಷ ವಯಸ್ಸಿನ ಮೆಸ್ಸಿ ಫುಟ್ಬಾಲ್ ಕ್ಲಬ್ ಬಾರ್ಸಿಲೋನಾದಲ್ಲಿ ಆಡುವಾಗ 778 ಪಂದ್ಯಗಳಲ್ಲಿ 672 ಗೋಲುಗಳನ್ನು ಗಳಿಸಿದ್ದಾರೆ. ಪ್ಯಾರಿಸ್ ಸೇಂಟ್-ಜರ್ಮೈನ್ ಪರ ಆಡುವಾಗ ಅವರು 74 ಪಂದ್ಯಗಳಲ್ಲಿ 32 ಗೋಲುಗಳನ್ನು ಗಳಿಸಿದ್ದಾರೆ.
ಇನ್ನು ಫುಟ್ಬಾಲ್ ದಂತಕಥೆ ಮೆಸ್ಸಿಯನ್ನು ಮರಳಿ ಕರೆತರುವ ಯೋಜನೆ ಇಲ್ಲ ಎಂದು ಬಾರ್ಸಿಲೋನಾ ಫುಟ್ಬಾಲ್ ಕ್ಲಬ್ ಅಧ್ಯಕ್ಷ ಜೋನ್ ಲಾಪೋರ್ಟಾ ಹೇಳಿದ್ದಾರೆ.