
ಕೋಲಾರ: ಕಾನೂನು ವಿಶ್ವವಿದ್ಯಾಲಯದ ಪರಿಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ ಪ್ರಾಂಶುಪಾಲ ಸೇರಿ ಮೂವರನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಕೋಲಾರ ಜಿಲ್ಲೆಯ ಬಸವಶ್ರೀ ಕಾನೂನು ಕಾಲೇಜಿನ ಉಪ ಪ್ರಾಂಶುಪಾಲ ನಾಗರಾಜ್, ಕಾರು ಚಾಲಕ ಹಾಗೂ ವಿದ್ಯಾರ್ಥಿಯೂ ಆಗಿರುವ ಜಗದೀಶ್ ಹಾಗೂ ಬಂಗಾರಪೇಟೆ ಕಾನೂನು ಕಾಲೇಜಿನ ವಿದ್ಯಾರ್ಥಿ ವರುಣ್ ಕುಮಾರ್ ಬಂಧಿತರು.
ಜ.23ರಂದು ನಿಗದಿಯಾಗಿದ್ದ ಕಾಂಟ್ರ್ಯಾಕ್ಟ್ ಲಾ-1 ಪ್ರಶ್ನೆ ಪತ್ರಿಕೆ ಟೆಲಿಗ್ರಾಂ ಮತ್ತು ವಾಟ್ಸಾಪ್ ಗ್ರೂಪ್ ಗಳಲ್ಲಿ ವೈರಲ್ ಆಗಿತ್ತು. ಕಾರು ಚಾಲಕ ಹಾಗೂ ವಿದ್ಯಾರ್ಥಿ ಆಗಿದ್ದ ಜಗದೀಶ್, ಉಪ ಪ್ರಾಂಶುಪಾಲ ನಾಗರಾಜ್ ಮೊಬೈಲ್ ನಲ್ಲಿದ್ದ ಪ್ರಶ್ನೆ ಪತ್ರಿಕೆಗಳನ್ನು ತನ್ನ ಮೊಬೈಲ್ ಗೆ ವರ್ಗಾಯಿಸಿಕೊಂಡಿದ್ದ. ಬಳಿಕ ಅವುಗಳನ್ನು ಅಭ್ಯರ್ಥಿಗಳಿಗೆ ಸೋರಿಕೆ ಮಾಡಿ ಹಣ ಗಳಿಸುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.
ಇನ್ನೋರ್ವ ಆರೋಪಿ ಬಂಗಾರಪೇಟೆ ಕಾನೂನು ಕಾಲೇಜು ವಿದ್ಯಾರ್ಥಿ ವರುಣ್, ಪರೀಕ್ಷೆ ಹಿಂದಿನ ದಿನ ಕಾಲೇಜಿಗೆ ಬಂದು ಯಾರಿಗೂ ಗೊತ್ತಾಗದಂತೆ ಪ್ರಶ್ನೆ ಪತ್ರಿಕೆಗಳನ್ನು ತೆರೆದು ಅವುಗಳನ್ನು ತನ್ನ ಮೊಬೈಲ್ ನಲ್ಲಿ ಸೆರೆಹಿಡಿದು, ಹಣಕ್ಕಾಗಿ ಆನ್ ಲೈನ್ ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುತ್ತಿದ್ದ.
ಕರ್ನಾಟಕ ಕಾನೂನು ವಿಶ್ವವಿದ್ಯಾಲಯಗಳ ಚೇರ್ ಮನ್ ಹಾಗೂ ಜಾಗೃತದಳ-2ರ ಅಧಿಕಾರಿ ವಿಶ್ವನಾಥ್ ಕೆ.ಎನ್. ಸೈಬರ್ ಕ್ರೈಂ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.