ಬೆಳಗಾವಿ: ಗ್ಯಾರಂಟಿ ಯೋಜನೆಗಳಿಂದ ಹಳ್ಳಿ ಹೆಣ್ಣುಮಕ್ಕಳು ದಾರಿ ತಪ್ಪಿದ್ದಾರೆ ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಹೆಚ್.ಡಿ.ಕೆ ಹೇಳಿಕೆಗೆ ಕಿಡಿಕಾರಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ನಾನು ಕೇಳುತ್ತಿದ್ದೇನೆ ಗ್ಯಾರಂಟಿ ಯೋಜನೆಯಿಂದ ಯಾವ ಹಳ್ಳಿಯ ಹೆಣ್ಣುಮಕ್ಕಳು ದಾರಿ ತಪ್ಪಿದ್ದಾರೆ? ಈ ಬಗ್ಗೆ ಕುಮಾರಸ್ವಾಮಿಯವರು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಹಳ್ಳಿ ಹೆಣ್ಣುಮಕ್ಕಳ ಬಗ್ಗೆ ಯಾಕೆ ಇಷ್ಟು ಹಗುರವಾಗಿ ಮಾತನಾಡುತ್ತಿದ್ದೀರಿ? ಹೆಚ್.ಡಿ.ಕೆ ಹೇಳಿಕೆಗಳು ಅವರ ಹಾಗೂ ಬಿಜೆಪಿಯವರ ಮನಸ್ಥಿತಿಯ ಬಗ್ಗೆ ರಾಜ್ಯದ ಜನತೆಗೆ ಗೊತ್ತುಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಯಾವುದೇ ಸ್ವಾರ್ಥಕ್ಕಾಗಿ ಯೋಜನೆಗಳನ್ನು ಜಾರಿ ಮಾಡಿಲ್ಲ. ನಮ್ಮ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಎಲ್ಲರೂ ಅನುಕೂಲ ಪಡೆಯುತ್ತಿದ್ದಾರೆ. ಬಿಜೆಪಿಗರು ಮಹಿಳಾ ಅಭಿವೃದ್ಧಿ, ಸಬಲೀಕರಣದ ವಿರೋಧಿಗಳು. ಇದೇ ಕಾರಣಕ್ಕೆ ಹೋದಲೆಲ್ಲಾ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.
ಇದೇ ವೇಳೆ ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್ ತಮ್ಮ ಬಗ್ಗೆ ನೀಡಿರುವ ವಿವಾದಾತ್ಮಕ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಲಕ್ಷ್ಮೀ ಹೆಬ್ಬಾಳ್ಕರ್. ಸಂಜಯ್ ಪಾಟೀಲ್, ನನ್ನ ವಿರುದ್ಧ ನೀಡಿರುವ ಹೇಳಿಕೆ ಇಡೀ ಸ್ತ್ರೀ ಕುಲಕ್ಕೆ ಮಾಡಿದ ಅವಮಾನ. ರಾಜ್ಯದ ಮಹಿಳೆಯರನ್ನು ಪ್ರತಿನಿಧಿಸುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ನನ್ನ ಬಗ್ಗೆ ಹೇಳಿಕೆ ನೀಡಿರುವುದು ಇಡೀ ಮಹಿಳಾ ಸಮಾಜಕ್ಕೆ, ಮಹಿಳೆಯರ ಆತ್ಮಗೌರವಕ್ಕೆ ಮಾಡಿದ ಅಪಮಾನ ಎಂದು ಗುಡುಗಿದರು.