ಬೆಂಗಳೂರು: ಗೊಂದಲಕ್ಕೀಡಾದ ಕರ್ನಾಟಕ ಲೋಕಸೇವಾ ಆಯೋಗ ಹಾಗೂ ಕೇಂದ್ರ ಸರ್ಕಾರದ ಬ್ಯಾಕಿಂಗ್ ಪರೀಕ್ಷಾ ವೇಳಾಪಟ್ಟಿಯನ್ನು ತಕ್ಷಣ ಬದಲಿಸುವಂತೆ ವಿಧಾನಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಒತ್ತಾಯಿಸಿದ್ದಾರೆ.
ಶುಕ್ರವಾರ ವಿಧಾನ ಪರಿಷತ್ ಅಧಿವೇಶನದ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಮುಂದಿನ ತಿಂಗಳು ಆಗಸ್ಟ್ 25 ರಂದು ರಾಜ್ಯ ಲೋಕಸೇವಾ ಆಯೋಗವು ಕೆ.ಪಿ.ಎಸ್.ಸಿ. ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ನೇಮಕಾತಿ ಪೂರ್ವಭಾವಿ ಪರೀಕ್ಷೆಯನ್ನು ನಿಗದಿ ಮಾಡಿದೆ. ಆದರೆ, ಕೇಂದ್ರ ಸರ್ಕಾರದ ಬ್ಯಾಂಕಿಂಗ್ ಪರೀಕ್ಷೆಯೂ ಕೂಡ(ಐಬಿಪಿಎಸ್) ಅದೇ ದಿನ ನಡೆಯುತ್ತಿದೆ. ಒಂದೇ ದಿನ ನಡೆಯುವ ಎರಡು ಪರೀಕ್ಷೆಗಳಿಂದ 5 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಗೊಂದಲಕ್ಕೀಡಾಗಿದ್ದಾರೆ ಎಂದರು.
ಈ ಬಾರಿ ನಮ್ಮೆಲ್ಲರ ನಿರೀಕ್ಷೆಯಂತೆ ಕನ್ನಡದಲ್ಲಿಯೇ ಐಬಿಪಿಎಸ್ ಪರೀಕ್ಷೆಯನ್ನು ಬರೆಯಲು ಅವಕಾಶ ಮಾಡಿಕೊಡಲಾಗಿದೆ. ಇದೊಂದು ಸುವರ್ಣಾವಕಾಶ ಕೂಡ. .ಹಾಗಾಗಿ ಒಂದೇ ದಿನ ಎರಡೂ ಪರೀಕ್ಷೆಗಳು ನಿಗದಿ ಆಗಿರುವುದರಿಂದ ಸಾವಿರಾರು ಪದವೀಧರ ನಿರುದ್ಯೋಗಿ ಅಭ್ಯರ್ಥಿಗಳು ಯಾವ ಪರೀಕ್ಷೆಯನ್ನು ಬರೆಯಬೇಕು ಎಂಬ ಗೊಂದಲಕ್ಕೀಡಾಗಿದ್ದು, ಅವಕಾಶಗಳಿಂದ ವಂಚಿತರಾಗಲಿದ್ದಾರೆ. ಎಂದು ಹೇಳಿದ್ದಾರೆ.
ಈ ವಿಷಯವನ್ನು ಸರ್ಕಾರವು ಗಂಭೀರವಾಗಿ ತೆಗೆದುಕೊಂಡು ಆಗಸ್ಟ್ 25 ರಂದು ನಿಗದಿ ಆಗಿರುವ ಪೂರ್ವಭಾವಿ ಪರೀಕ್ಷೆಯನ್ನು ತಕ್ಷಣ ಮುಂದೂಡಿ ಪರೀಕ್ಷಾ ದಿನಾಂಕವನ್ನು ಮರು ನಿಗದಿ ಮಾಡಬೇಕು ಎಂದು ಅವರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಈ ರೀತಿಯ ಗೊಂದಲದ ನಿರ್ಣಯಗಳಿಂದ ರಾಜ್ಯದ ಸಾವಿರಾರು ಪ್ರತಿಭಾನ್ವಿತ ನಿರುದ್ಯೋಗಿ ಪದವೀಧರರು ಅವಕಾಶ ವಂಚಿತರಾಗಲಿದ್ದಾರೆ. ಇನ್ನು ಮುಂದೆ ಪರೀಕ್ಷಾ ದಿನಾಂಕವನ್ನು ನಿಗದಿ ಮಾಡುವ ಸಮಯದಲ್ಲಿ ಕೇಂದ್ರ ಸರ್ಕಾರದ ಪ್ರಮುಖ ಪರೀಕ್ಷೆಗಳನ್ನೂ ಕೂಡ ಗಮನದಲ್ಲಿಟ್ಟುಕೊಂಡು ಪರೀಕ್ಷಾ ವೇಳಾಪಟ್ಟಿಯನ್ನು ಸಿದ್ಧ ಮಾಡಬೇಕು, ಆ ಮೂಲಕ ರಾಜ್ಯದ ಸ್ಥಳೀಯ ನಿರುದ್ಯೋಗಿ ಪದವೀಧರ ಅಭ್ಯರ್ಥಿಗಳ ಹಿತ ಕಾಪಾಡುವಂತೆ ಸಭಾಪತಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.