ಮೈಸೂರು: ಮಹಿಳೆ ಕಿಡ್ನ್ಯಾಪ್ ಕೇಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ವಿಚಾರಣೆಗೆ ಹಾಜರಾಗದೇ ನಾಪತ್ತೆಯಾಗಿರುವ ಭವಾನಿ ರೇವಣ್ಣ ಅವರಿಗಾಗಿ ಅಧಿಕಾರಿಗಳು ತೀವ್ರ ಶೋಧ ಮುಂದುವರೆಸಿದ್ದಾರೆ.
ಭವಾನಿ ರೇವಣ್ಣ ನಿನ್ನೆ ಹಾಸನದ ಹೊಳೆನರಸೀಪುರ ನಿವಾಸದಲ್ಲಿ ಎಸ್ಐಟಿ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಸುಮಾರು 7 ಗಂಟೆಗಳ ಕಾಲ ಎಸ್ ಐಟಿ ಅಧಿಕಾರಿಗಳು ಹೊಳೆನರಸೀಪುರ ನಿವಾಸದಲ್ಲಿ ಕಾದು ಕುಳಿತಿದ್ದರು. ಆದರೆ ಭವಾನಿ ರೇವಣ್ಣ ವಿಚಾರಣೆಗೆ ಹಾಜರಾಗಿಲ್ಲ. ಬಂಧನ ಭೀತಿಯಲ್ಲಿ ಭವಾನಿ ರೇವಣ್ಣ ತಲೆಮರೆಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಭವಾನಿ ರೇವಣ್ಣ ಅವರಿಗಾಗಿ ಎಸ್ಐಟಿ ಅಧಿಕಾರಿಗಳು ಹಲವೆಡೆ ಹುಡುಕಾಟ ನಡೆಸಿದ್ದಾರೆ. ಭವಾನಿ ರೇವಣ್ಣ ಮೈಸೂರಿನಲ್ಲಿರುವ ಬಗ್ಗೆ ಮಾಹಿತಿ ಹಿನ್ನೆಲೆಯಲ್ಲಿ ಅವರ ಸಹೋದರಿಯ ಮಗನ ಮನೆ, ಸಂಬಂಧಿಕರ ಮನೆ, ಸಂಬಂಧಿಯ ತೋಟದ ಮನೆಯಲ್ಲಿಯೂ ಶೋಧ ನಡೆಸಲಾಗಿದೆ.
ಈ ನಡುವೆ ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಮಗ ಪ್ರಜ್ವಲ್ ವಿದೇಶದಲ್ಲಿ ತಲೆಮರೆಸಿಕೊಂಡು ಎಸ್ಐಟಿ ಕೈಗೆ ಸಿಗದೇ ಆಟವಾಡಿಸುತ್ತಿದ್ದ. ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದಾಗಲಿದೆ ಎಂಬುದು ಗೊತ್ತಾಗುತ್ತಿದ್ದಂತೆ ಅನಿವಾರ್ಯವಾಗಿ ಬೆಂಗಳೂರಿಗೆ ವಾಪಸ್ ಆಗಿ ಶರಣಾಗಿದ್ದಾನೆ. ಈಗ ಮಗ ಪತ್ತೆಯಾದ ಬೆನ್ನಲ್ಲೇ ತಾಯಿ ಭವಾನಿ ರೇವಣ್ಣ ನಾಪತ್ತೆಯಾಗಿದ್ದು, ಎಸ್ಐಟಿ ಶೋಧ ಮುಂದುವರೆಸಿದೆ.