ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧವೂ ಕಮಿಷನ್ ಆರೋಪ ಮಾಡಿದ್ದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಇದೀಗ ಉಲ್ಟಾ ಹೊಡೆದಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಎಲ್ಲಾ ರೀತಿಯ ಸಹಕಾರ ನಿಡುತ್ತಿದ್ದಾರೆ. ಬಿಬಿಎಂಪಿಯಲ್ಲಿನ ಬಾಕಿ ಬಿಲ್ ಬಿಡುಗಡೆಗೆ ಡಿಸಿಎಂ ಭರವಸೆ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕೆಂಪಣ್ಣ, ರಾಜ್ಯದ 1054 ಸಣ್ಣ ಗುತ್ತಿಗೆದಾರರ ಒಂದು ಕೋಟಿ ರೂಪಾಯಿಗಿಂತ ಕಡಿಮೆ ಬಿಲ್ ಇರುವ 600 ಕೋಟಿ ರೂಪಾಯಿ ಹಣ ಲೋಕೋಪಯೋಗಿ ಇಲಾಖೆ ಯಾವುದೇ ಲಂಚ ಪಡೆಯದೇ ಬಿಡುಗಡೆ ಮಾಡಿದೆ ಎಂದರು.
ಇನ್ನು ಬಿಬಿಎಂಪಿಯಿಂದ 300 ಕೋಟಿ ಪ್ಯಾಕೇಜ್ ಟೆಂಡರ್ ಆಹ್ವಾನಿಸಲಾಗಿದೆ. ಈ ಪ್ಯಾಕೇಜ್ ಟೆಂಡರ್ ಬಗ್ಗೆ ಅನುಮಾನವಿದೆ. ವಿವಿಧ ಇಲಾಖೆಗಳಲ್ಲಿ ಅನಗತ್ಯ ಪ್ಯಾಕೇಜ್ ಟೆಂಡರ್ ನಡೆಯುತ್ತಿದೆ. ಕೂಡಲೇ ಪ್ಯಾಕೇಜ್ ಟೆಂಡರ್ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.