ಬೆಂಗಳೂರು: ಇಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ಎಲ್ಲ ವೃತ್ತಿಪರ ಕೋರ್ಸ್ ಗಳ ಸೀಟು ಹಂಚಿಕೆಯನ್ನು ಏಕಕಾಲಕ್ಕೆ ನಡೆಸಲು ನಿರ್ಧರಿಸಿದ್ದ ಸರ್ಕಾರ ಈಗ ವೈದ್ಯಕೀಯ ಹೊರತುಪಡಿಸಿ ಉಳಿದ ಕೋರ್ಸ್ ಗಳ ಸೀಟು ಹಂಚಿಕೆ ಪ್ರಾರಂಭಿಸಲು ನಿರ್ಧರಿಸಿದೆ.
ರಾಷ್ಟ್ರೀಯ ವೈದ್ಯಕೀಯ ಆಯೋಗ ಬಿಡುಗಡೆ ಮಾಡಿರುವ ವೇಳಾಪಟ್ಟಿಯ ಪ್ರಕಾರ, ಆಗಸ್ಟ್ 14 ರಿಂದ ನೀಟ್ ರ್ಯಾಂಕಿಂಗ್ ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್ ಆರಂಭವಾಗಲಿದ್ದು, 4 ಸುತ್ತಿನ ಕೌನ್ಸೆಲಿಂಗ್ ಅಕ್ಟೋಬರ್ 30ಕ್ಕೆ ಮುಕ್ತಾಯವಾಗುತ್ತದೆ. ಅಲ್ಲಿಯವರೆಗೂ ಕಾಯುತ್ತಾ ಕುಳಿತರೆ ಇಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶುವೈದ್ಯಕೀಯ ಸೇರಿದಂತೆ ಇನ್ನಿತರ ಕೋರ್ಸುಗಳ ಆಕಾಂಕ್ಷಿಗಳಿಗೆ ಸೀಟು ಹಂಚಿಕೆ ವಿಳಂಬವಾಗುತ್ತದೆ.
ಈ ನಡುವೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಸೆಪ್ಟೆಂಬರ್ 15 ರೊಳಗೆ ಮೊದಲ ವರ್ಷದ ಬ್ಯಾಚ್ ಗೆ ತರಗತಿಗಳನ್ನು ಆರಂಭಿಸಲು ಎಲ್ಲ ತಾಂತ್ರಿಕ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ. ರಾಜ್ಯ ಸಿಇಟಿ ಬರೆದ ಶೇಕಡ 60ಕ್ಕೂ ಹೆಚ್ಚು ಅಭ್ಯರ್ಥಿಗಳು ವೈದ್ಯಕೀಯೇತರ ಕೋರ್ಸ್ ಆಕಾಂಕ್ಷಿಗಳಾಗಿದ್ದು, ವೈದ್ಯಕೀಯ ಕೌನ್ಸೆಲಿಂಗ್ ಮುಗಿಯುವವರೆಗೆ ಅವರೆಲ್ಲ ಕಾಯುವ ಬದಲು ಇಂಜಿನಿಯರಿಂಗ್ ಮತ್ತು ಇತರೆ ವೈದ್ಯಕೀಯೇತರ ಕೋರ್ಸ್ ಗಳನ್ನು ಆಯ್ಕೆ ಮಾಡುವವರಿಗೆ ಕೌನ್ಸೆಲಿಂಗ್ ಪ್ರಕ್ರಿಯೆ ಪ್ರಾರಂಭಿಸಲು ನಿರ್ಧರಿಸಲಾಗಿದೆ.
ನೀಟ್ ಕೌನ್ಸೆಲಿಂಗ್ ಮುಗಿಯುವವರೆಗೆ ಕಾಯುತ್ತ ಕುಳಿತರೆ ಬೇರೆ ಕೋರ್ಸ್ ಆಕಾಂಕ್ಷಿಗಳಿಗೆ ಸೀಟು ಹಂಚಿಕೆ, ತರಗತಿಗಳು ತಡವಾಗಿ ಆರಂಭವಾಗುತ್ತವೆ. ಇದರಿಂದ ವೈದ್ಯಕೀಯೇತರ ಕೋರ್ಸ್ ಗಳಿಗೆ ಇಡೀ ಶೈಕ್ಷಣಿಕ ವರ್ಷ ತೊಂದರೆಯಾಗುತ್ತದೆ. ವೈದ್ಯಕೀಯೇತರ ಸೀಟುಗಳ ಹಂಚಿಕೆ ಕೌನ್ಸೆಲಿಂಗ್ ಆರಂಭಿಸಲು ಕೆಇಎಗೆ ನಿರ್ದೇಶನ ನೀಡಲಾಗುವುದು ಎನ್ನಲಾಗಿದೆ.