ಕೊಚ್ಚಿ: ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಜೆಡಿಎಸ್ ನಿರ್ಧಾರಕ್ಕೆ ಕೇರಳದಲ್ಲಿ ಇಬ್ಬರು ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ಎನ್.ಡಿ.ಎ. ಮೈತ್ರಿಕೂಟ ಸೇರ್ಪಡೆಯಾಗಿದ್ದರೂ ಕೇರಳ ಜೆಡಿಎಸ್ ಘಟಕ ಎಲ್.ಡಿ.ಎಫ್. ಮೈತ್ರಿಕೂಟದಲ್ಲೇ ಮುಂದುವರೆಯಲು ನಿರ್ಧರಿಸಿದೆ. ಕೇರಳ ಜೆಡಿಎಸ್ ಅಧ್ಯಕ್ಷ ಮತ್ತು ಶಾಸಕ ಮ್ಯಾಥ್ಯೂ ಟಿ. ಥಾಮಸ್, ರಾಜ್ಯದಲ್ಲಿ ಜೆಡಿಎಸ್ ಎನ್.ಡಿ.ಎ. ಮೈತ್ರಿಕೂಟ ಸೇರುವ ಯಾವುದೇ ಸಾಧ್ಯತೆ ಇಲ್ಲ. ನಾವು ಎಲ್.ಡಿ.ಎಫ್. ಮೈತ್ರಿಕೂಟದಲ್ಲಿಯೇ ಮುಂದುವರೆಯುತ್ತೇವೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಸಮಾನ ಅಂತರ ಕಾಯ್ದುಕೊಳ್ಳುವ ಬಗ್ಗೆ ಹಿಂದೆಯೇ ನಿರ್ಣಯ ಅಂಗೀಕರಿಸಿದ್ದು, ಅದಕ್ಕೆ ಈಗಲೂ ಬದ್ಧರಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಕೇರಳ ವಿಧಾನಸಭೆಯಲ್ಲಿ ಜೆಡಿಎಸ್ ಪಕ್ಷದ ಇಬ್ಬರು ಶಾಸಕರಾಗಿದ್ದಾರೆ. ಮ್ಯಾಥ್ಯೂ ಟಿ. ಥಾಮಸ್ ಕೇರಳ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷರಾಗಿದ್ದು, ಮತ್ತೊಬ್ಬ ಶಾಸಕ ಕೆ. ಕೃಷ್ಣ ಕುಟ್ಟಿ ಇಂಧನ ಸಚಿವರಾಗಿದ್ದಾರೆ. ಎನ್.ಡಿ.ಎ. ಮೈತ್ರಿಕೂಟಕ್ಕೆ ಜೆಡಿಎಸ್ ಸೇರಿರುವ ಬಗ್ಗೆ ಚರ್ಚಿಸಲು ಅಕ್ಟೋಬರ್ 7ರಂದು ಕೇರಳ ರಾಜ್ಯ ಜೆಡಿಎಸ್ ಸಮಿತಿ ಸಭೆ ನಡೆಸಿ ತೀರ್ಮಾನಿಸಲಿದೆ ಎಂದು ಹೇಳಲಾಗಿದೆ.