ಪಣಜಿ: ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಫಲವಂತಿಕೆ -ಐವಿಎಫ್ ಚಿಕಿತ್ಸೆಯನ್ನು ಉಚಿತವಾಗಿ ಕಲ್ಪಿಸುವ ಮೂಲಕ ಗೋವಾ ರಾಜ್ಯ ಮಹತ್ವದ ಯೋಜನೆ ಆರಂಭಿಸಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಫಲವಂತಿಕೆ ಚಿಕಿತ್ಸೆಯನ್ನು ಉಚಿತವಾಗಿ ನೀಡುವ ಮೊದಲ ರಾಜ್ಯವಾಗಿ ಗೋವಾ ಹೊರಹೊಮ್ಮಿದೆ.
ಗೋವಾದ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಐವಿಎಫ್ ಚಿಕಿತ್ಸೆ ನೀಡಲಾಗುವುದು. ಇದರೊಂದಿಗೆ ಎ.ಆರ್.ಟಿ., ಮತ್ತು ಐಯುಐ ಸೌಲಭ್ಯಗಳನ್ನು ಕೂಡ ನೀಡಲಿದ್ದು, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಬಂಬೋಲಿಮ್ ನಲ್ಲಿರುವ ಗೋವಾ ಮೆಡಿಕಲ್ ಕಾಲೇಜಿನಲ್ಲಿ ಯೋಜನೆಗೆ ಚಾಲನೆ ನೀಡಿದ್ದಾರೆ.
ಭಾರತದಲ್ಲಿ ಐವಿಎಫ್ ಚಿಕಿತ್ಸೆ ದುಬಾರಿಯಾಗಿದೆ. ಆಸ್ಪತ್ರೆ ಮತ್ತು ಐವಿಎಫ್ ಚಿಕಿತ್ಸೆ ವಿಧಾನ ಅವಲಂಬಿಸಿ ಪ್ರತಿಸಲ 70 ಸಾವಿರ ರೂ. ನಿಂದ 3 ಲಕ್ಷ ರೂಪಾಯಿವರೆಗೆ ವೆಚ್ಚವಾಗುತ್ತಿದೆ ಎನ್ನಲಾಗಿದ್ದು, ಗೋವಾ ಸರ್ಕಾರದಿಂದ ಉಚಿತವಾಗಿ ಐವಿಎಫ್ ಸೌಲಭ್ಯ ಕಲ್ಪಿಸಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗಾಗಲೇ 100 ಪೋಷಕರು ಹೆಸರು ನೋಂದಾಯಿಸಿಕೊಂಡಿದ್ದಾರೆ ಎನ್ನಲಾಗಿದೆ.