ಇಂದು ದೇಶಾದ್ಯಂತ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಭಾರತೀಯ ಯೋಧರನ್ನು ಸ್ಮರಿಸಲಾಗ್ತಿದೆ. ಕಾರ್ಗಿಲ್ ವಿಜಯ್ ದಿವಸವನ್ನು ಆಚರಿಸಲಾಗುತ್ತಿದೆ. ಪಾಕಿಸ್ತಾನಿ ಅತಿಕ್ರಮಣಕಾರರು ವಶಪಡಿಸಿಕೊಂಡಿದ್ದ ಕಾಶ್ಮೀರವನ್ನು ಮರಳಿ ಪಡೆಯಲು ತಮ್ಮ ಪ್ರಾಣವನ್ನೇ ಅರ್ಪಿಸಿದ ವೀರ ಯೋಧರ ಪರಮೋಚ್ಚ ತ್ಯಾಗ ಮತ್ತು ಶೌರ್ಯವನ್ನು ನೆನೆಯಲಾಗುತ್ತಿದೆ. ಕಾರ್ಗಿಲ್ ಯುದ್ಧದಲ್ಲಿ ಭಾರತ ವಿಜಯ ಪತಾಕೆ ಹಾರಿಸಿ ಇಂದಿಗೆ 24 ವರ್ಷಗಳೇ ಕಳೆದಿದೆ. 1999ರ ಜುಲೈ 26ರಂದು ಆಪರೇಷನ್ ವಿಜಯ್ ಯಶಸ್ವಿಯಾಗಿತ್ತು.
ಕಾರ್ಗಿಲ್ ಯುದ್ಧ ಆರಂಭವಾಗಿದ್ದು 1999ರ ಮೇ 8ರಂದು. ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯೊಳಗೆ ಪಾಕಿಸ್ತಾನಿ ಪಡೆಗಳು ಅಕ್ರಮವಾಗಿ ನುಸುಳಿದ್ದವು. ಅದಾದ ಬಳಿಕ ಗಡಿ ನಿಯಂತ್ರಣ ರೇಖೆಯಲ್ಲಿ ಗುಂಡಿನ ಚಕಮಕಿ ಶುರುವಾಗಿತ್ತು. ಯುದ್ಧ ಆರಂಭಕ್ಕೂ ತಿಂಗಳುಗಳ ಮೊದಲೇ ಪಾಕಿಗಳು ಎಲ್ಒಸಿಯಾದ್ಯಂತ ಭಾರತೀಯ ಭೂಪ್ರದೇಶವನ್ನು ದಾಟಿದ್ದರು. ಹೆದ್ದಾರಿಯಲ್ಲಿನ ಎಲ್ಲಾ ಮಿಲಿಟರಿ ಮತ್ತು ನಾಗರಿಕರ ಓಡಾಟಕ್ಕೂ ಅಡ್ಡಿಪಡಿಸಿದ್ದರು.
ಇನ್ನಷ್ಟು ದುಷ್ಕೃತ್ಯ ನಡೆಸಲು ಸಜ್ಜಾಗಿಯೇ ಬಂದಿದ್ದ ಪಾಕ್ ಪಡೆ, ಕಾರ್ಗಿಲ್‌ನ ದ್ರಾಸ್ ಮತ್ತು ಲಡಾಖ್ ಪ್ರದೇಶದ ಬಟಾಲಿಕ್ ವಲಯಗಳ ಮೇಲೆ ಆಕ್ರಮಣ ಮಾಡಿತ್ತು. ಕಾರ್ಗಿಲ್‌ನ ಹಿಮಾವೃತ ಪ್ರದೇಶದಲ್ಲಿ ಸುಮಾರು ಮೂರು ತಿಂಗಳ ಕಾಲ ಭಾರತ-ಪಾಕಿಸ್ತಾನದ ಮಧ್ಯೆ ಯುದ್ಧ ನಡೆದಿತ್ತು. ಸುದೀರ್ಘ ಯುದ್ಧದ ನಂತರ ಪಾಕಿಗಳನ್ನು ಹಿಮ್ಮೆಟ್ಟಿಸಿದ ಭಾರತೀಯ ಸೇನೆ ವಿಜಯವನ್ನು ಘೋಷಿಸಿತ್ತು.
ದ್ರಾಸ್, ಕಕ್ಸರ್, ಬಟಾಲಿಕ್ ಮತ್ತು ಟರ್ಟೋಕ್ ಸೆಕ್ಟರ್‌ಗಳಲ್ಲಿ ನಡೆದ ತೀವ್ರ ಕಾಳಗದಲ್ಲಿ ಭಾರತ ಸುಮಾರು 500 ವೀರ ಸೈನಿಕರನ್ನು ಕಳೆದುಕೊಂಡಿದೆ. ದೇಶದ ರಕ್ಷಣೆಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ಆ ವೀರ ಯೋಧರನ್ನು ನೆನೆದು ಗೌರವ ಸಮರ್ಪಿಸುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯ.