ಟೊಮೊಟೊ ಬಳಿಕ ಇದೀಗ ಈರುಳ್ಳಿ ಬೆಲೆಯಲ್ಲಿ ಬೆಲೆಯಲ್ಲಿ ಏರಿಕೆಯಾಗಿದೆ. ಹೀಗೆ ದೈನಂದಿನ ಬಳಕೆಯ ಪದಾರ್ಥಗಳ ಬೆಲೆಯಲ್ಲಿ ಏರಿಕೆಯಾಗುತ್ತಿರುವುದರಿಂದ ಜನಸಾಮಾನ್ಯರು ಹೈರಾಣಾಗಿದ್ದು, ಹೀಗಾಗಿ ಈರುಳ್ಳಿ ಬೆಲೆ ನಿಯಂತ್ರಿಸಲು ಮುಂದಾಗಿರುವ ಕೇಂದ್ರ ಸರ್ಕಾರ ರಫ್ತು ವಹಿವಾಟು ತಗ್ಗಿಸಲು ಶೇಕಡ 40ರಷ್ಟು ಸುಂಕ ವಿಧಿಸಿದೆ. ಅಲ್ಲದೆ ಸಬ್ಸಿಡಿ ದರದಲ್ಲಿ ಈರುಳ್ಳಿ ಮಾರಾಟಕ್ಕೆ ಕ್ರಮ ಕೈಗೊಂಡಿದೆ.
ಇದರ ಮಧ್ಯೆ ಮಹಾರಾಷ್ಟ್ರದ ಲೋಕೋಪಯೋಗಿ ಸಚಿವ ದಾದಾ ಭುಸೆ ನೀಡಿರುವ ಹೇಳಿಕೆಯೊಂದು ವಿವಾದಕ್ಕೆ ಕಾರಣವಾಗಿದೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜನ 10 ಲಕ್ಷ ರೂಪಾಯಿ ಬೆಲೆಯ ಕಾರು ಖರೀದಿಸಬಹುದಾದರೆ ಈರುಳ್ಳಿಯನ್ನು ಸಹ ಖರೀದಿಸಲು ಶಕ್ತರಿರುತ್ತಾರೆ. ಅಷ್ಟೂ ಹಣವಿಲ್ಲದೆ ಇರುವವರು ಎರಡು ತಿಂಗಳುಗಳ ಕಾಲ ಈರುಳ್ಳಿ ತಿನ್ನದೆ ಇದ್ದರೆ ಏನು ವ್ಯತ್ಯಾಸವಾಗುವುದಿಲ್ಲ ಎಂದು ಉಡಾಫೆಯ ಮಾತುಗಳನ್ನು ಆಡಿದ್ದಾರೆ.
ಸಚಿವರ ಈ ಹೇಳಿಕೆ ಹೊರ ಬೀಳುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲೂ ಸಹ ಸಚಿವ ದಾದಾ ಭುಸೆ ಅವರ ಹೇಳಿಕೆಯನ್ನು ಟ್ರೋಲ್ ಮಾಡಲಾಗುತ್ತಿದೆ. ಈ ಹಿಂದೆಯೂ ಸಹ ಈರುಳ್ಳಿ ಬೆಲೆ ಏರಿಕೆಯಾದ ಸಂದರ್ಭದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ನಾನು ಅಡುಗೆಗೆ ಈರುಳ್ಳಿ ಬಳಸುವುದಿಲ್ಲ ಎಂದು ಹೇಳಿದ್ದು ತೀವ್ರ ವಿವಾದಕ್ಕೆ ಕಾರಣವಾಗಿತ್ತು.