ಮುಂಬೈ: ಲೋಕಸಭೆ ಚುನಾವಣೆಗೆ ಸಿದ್ಧತೆಯ ಭಾಗವಾಗಿ ಇಂದಿನಿಂದ ವಿಪಕ್ಷಗಳ ಮಹಾ ಮೈತ್ರಿ ‘ಇಂಡಿಯಾ’ ಒಕ್ಕೂಟದ ಮೂರನೇ ಸಭೆ ನಡೆಯಲಿದೆ.
ಪಾಟ್ನಾ, ಬೆಂಗಳೂರು ಬಳಿಕ ಮುಂಬೈನಲ್ಲಿ ಮೂರನೇ ಸಭೆ ನಿಗದಿಯಾಗಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ಎನ್.ಡಿ.ಎ. ಮೈತ್ರಿಕೂಟಕ್ಕೆ ಪ್ರಬಲ ಪೈಪೋಟಿ ನೀಡಲು ರಚನೆಯಾಗಿರುವ ‘ಇಂಡಿಯನ್ ನ್ಯಾಷನಲ್ ಡೆವಲಪ್ಮೆಂಟ್ ಇನ್ ಕ್ಲೂಸಿವ್ ಅಲಯನ್ಸ್’ ಮೈತ್ರಿಕೂಟದ ಮೂರನೆಯ ಸಭೆ ಇಂದಿನಿಂದ ಎರಡು ದಿನ ಮುಂಬೈನಲ್ಲಿ ಆರಂಭವಾಗಲಿದೆ.
ಮೈತ್ರಿಕೂಟದ ಲೋಗೋ ಅನಾವರಣ ಮಾಡಲಿದ್ದು, ಮೈತ್ರಿಕೂಟಕ್ಕೆ ಸಂಚಾಲಕರನ್ನು ನೇಮಕ ಮಾಡಲಾಗುವುದು. ಸೀಟು ಹಂಚಿಕೆ ಬಗ್ಗೆಯೂ ಮೈತ್ರಿಕೂಟದ ನಾಯಕರು ಚರ್ಚೆ ನಡೆಸುವ ಸಾಧ್ಯತೆ ಇದೆ.
ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ನಡೆಯಲಿರುವ ಸಮಾವೇಶದಲ್ಲಿ, ಮೈತ್ರಿಯ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ರೂಪಿಸಲು, ದೇಶಾದ್ಯಂತ ಆಂದೋಲನಗಳನ್ನು ನಡೆಸಲು ಮತ್ತು ಸೀಟು ಹಂಚಿಕೆಗಾಗಿ ಜಂಟಿ ಯೋಜನೆಗಳನ್ನು ರೂಪಿಸಲು 27 ಪಕ್ಷಗಳ ನಾಯಕರು ಚರ್ಚೆ ನಡೆಸಲಿದ್ದಾರೆ.