ನವದೆಹಲಿ: ಆರೋಪಿಗಳಿಗೆ ಶಿಕ್ಷೆ ವಿಧಿಸುವ ನ್ಯಾಯಾಧೀಶರೊಬ್ಬರು ಲೈಂಗಿಕ ಕಿರುಕುಳಕ್ಕೆ ಬೇಸತ್ತು ಸಾಯುವ ಆಲೋಚನೆ ಮಾಡಿದ್ದಾರೆ.
ಘನತೆಯಿಂದ ಜೀವ ಕಳೆದುಕೊಳ್ಳಲು ಅನುಮತಿ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರಿಗೆ ಪತ್ರ ಬರೆದಿದ್ದಾರೆ.
ಉತ್ತರ ಪ್ರದೇಶದ ಬಾಂದಾ ಜಿಲ್ಲೆಯ ನ್ಯಾಯಾಧೀಶೆಯೊಬ್ಬರು ಬರೆದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮುಖ್ಯ ನ್ಯಾಯಮೂರ್ತಿಗಳು ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿ ಅಲಹಾಬಾದ್ ಹೈಕೋರ್ಟ್ ನಿಂದ ವರದಿ ಕೇಳಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರ ಸೂಚನೆ ಮೇರೆಗೆ ಸುಪ್ರೀಂ ಕೋರ್ಟ್ ಪ್ರಧಾನ ಕಾರ್ಯದರ್ಶಿ ಅತುಲ್ ಎಂ, ಕುರ್ಹೇಕರ್ ಅವರು, ಅಲಹಾಬಾದ್ ಹೈಕೋರ್ಟ್ ರಿಜಿಸ್ಟ್ರಾರ್ ಗೆ ಪತ್ರ ಬರೆದು ಮಹಿಳಾ ನ್ಯಾಯಾಧೀಶರ ದೂರಿನ ಬಗ್ಗೆ ಸಂಪೂರ್ಣ ವರದಿ ನೀಡಲು ಸೂಚಿಸಿದ್ದಾರೆ.
ಸೇವಾವಧಿಯಲ್ಲಿ ಬಹಿರಂಗ ಕೋರ್ಟ್ ವೇದಿಕೆಯಲ್ಲೇ ಕಿರುಕುಳಕ್ಕೆ ಒಳಗಾಗಿದ್ದೇನೆ. ನನಗೆ ತೀವ್ರ ಲೈಂಗಿಕ ಕಿರುಕುಳ ನೀಡಲಾಗಿದೆ. ಜಿಲ್ಲಾ ನ್ಯಾಯಾಧೀಶರು ಮತ್ತು ಸಹಚರರು ಕಿರುಕುಳ ನೀಡಿದ್ದಾರೆ. ರಾತ್ರಿ ವೇಳೆ ನ್ಯಾಯಾಧೀಶರನ್ನು ಭೇಟಿಯಾಗುವಂತೆ ಹೇಳಲಾಗಿದೆ. ಘನತೆಯುತ ಮಾರ್ಗದಲ್ಲಿ ನನ್ನ ಜೀವ ಕಳೆದುಕೊಳ್ಳಲು ಅವಕಾಶ ಕೊಡಿ ಎಂದು ಸಿಜೆಐ ಉದ್ದೇಶಿಸಿ ಮಹಿಳಾ ನ್ಯಾಯಾಧೀಶರು ಪತ್ರ ಬರೆದಿದ್ದಾರೆ.