ಬೆಂಗಳೂರು: ಸಿಇಟಿ ಪರೀಕ್ಷೆಯಲ್ಲಿ ಪಠ್ಯಕ್ರಮ ಹೊರತಾದ ಪ್ರಶ್ನೆ ಕೇಳಿದ್ದು, ಆತಂಕದಲ್ಲಿರುವ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು ಆ ಪ್ರಶ್ನೆಗಳನ್ನು ಕೈಬಿಟ್ಟು ಮೌಲ್ಯಮಾಪನ ಮಾಡುವುದೇ ಸೂಕ್ತವೆಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೃಪಾಂಕ ನೀಡದೇ ಮತ್ತು ಮರು ಪರೀಕ್ಷೆ ನಡೆಸದೇ ಔಟ್ ಆಫ್ ಸಿಲಬಸ್ ಪ್ರಶ್ನೆ ಕೈಬಿಟ್ಟು ಮೌಲ್ಯಮಾಪನ ನಡೆಸಲಿ ಎಂದು ಸಿಇಟಿ ಗೊಂದಲಕ್ಕೆ ತಜ್ಞರು ಮತ್ತು ಹಿರಿಯ ಐಎಎಸ್ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಮರು ಪರೀಕ್ಷೆ ನಡೆಸುವುದರಿಂದ ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗುತ್ತದೆ. ಕೃಪಾಂಕ ನೀಡಿದರೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ. ಈ ರೀತಿ ಕೃಪಾಂಕ, ಮರು ಪರೀಕ್ಷೆಯಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿದ್ಯಾರ್ಥಿಗಳು ಪೋಷಕರ ನಂಬಿಕೆ ಮತ್ತು ಆತ್ಮ ವಿಶ್ವಾಸ ಕಳೆದುಕೊಳ್ಳಬೇಕಾಗುತ್ತದೆ. ಇದರ ಬದಲಿಗೆ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು ಪಠ್ಯಕ್ರಮ ಹೊರತಾದ ಪ್ರಶ್ನೆ ಕೈಬಿಟ್ಟು ಉಳಿದ ಪ್ರಶ್ನೆಗಳನ್ನೇ ಗರಿಷ್ಠ ಅಂಕಗಳೆಂದು ಪರಿಗಣಿಸಿ ಇದರ ಆಧಾರದ ಮೇಲೆ ಫಲಿತಾಂಶ ನೀಡುವುದು ಸೂಕ್ತ ಎಂದು ಅಭಿಪ್ರಾಯವ್ಯಕ್ತವಾಗಿದೆ.
ಬಹುತೇಕ ಶಿಕ್ಷಣ ತಜ್ಞರು, ಹಿರಿಯ ಅಧಿಕಾರಿಗಳು ಈ ಕುರಿತಾಗಿ ಸಲಹೆ ನೀಡಿದ್ದಾರೆ. ಸಿಇಟಿ ಪರೀಕ್ಷೆ 2024ರಲ್ಲಿ ಗಣಿತ, ಜೀವಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ ಪರೀಕ್ಷೆ ನಡೆಸಿದ್ದು, ಪ್ರತಿ ವಿಷಯದಲ್ಲೂ 10 ರಿಂದ 12 ಪ್ರಶ್ನೆಗಳು ಪಠ್ಯಕ್ರಮದಿಂದ ಹೊರತಾದ ಪ್ರಶ್ನೆಗಳಾಗಿವೆ. ನಾಲ್ಕು ವಿಷಯಗಳಿಂದ ಅಂದಾಜು 45ಕ್ಕೂ ಹೆಚ್ಚು ಪ್ರಶ್ನೆ ಕೇಳಿದ್ದು, ವಿದ್ಯಾರ್ಥಿಗಳಿಗೆ ಆತಂಕ, ಗೊಂದಲ ಉಂಟಾಗಿದೆ.