ಬೆಂಗಳೂರು: ಬಿದಿರು ಕೃಷಿಗೆ ಉತ್ತೇಜನ ಮತ್ತು ಅರಣ್ಯ ಪ್ರದೇಶದಲ್ಲಿ ಬಿದಿರು ಬೆಳೆಸಲು ಒತ್ತು ನೀಡಲು ರಾಜ್ಯ ಬಿದಿರು ಅಭಿವೃದ್ಧಿ ಮಂಡಳಿ, ಬಿದಿರು ಕೃಷಿ ಮತ್ತು ಉದ್ದಿಮೆ ನೀತಿ ರೂಪಿಸಲು ಸರ್ಕಾರ ಕ್ರಮ ಕೈಗೊಂಡಿದೆ.
ಬಿದಿರು ಕೃಷಿ ಮತ್ತು ಬಿದಿರು ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಅರಣ್ಯ ಇಲಾಖೆ, ಕೃಷಿ ತಂತ್ರಜ್ಞರ ಸಂಸ್ಥೆ ಚರ್ಚೆ ನಡೆಸಿದ್ದು, ಮಹಾರಾಷ್ಟ್ರ ಮಾದರಿಯಲ್ಲಿ ಅನುಸರಿಸಲು ಚಿಂತನೆ ನಡೆಸಲಾಗಿದೆ.
ಬಿದಿರು ಬೆಳೆಯುವ ಕೃಷಿಕರಿಗೆ ಪ್ರೋತ್ಸಾಹ ಧನ ಯೋಜನೆ ಜಾರಿಗೊಳಿಸಲಾಗುವುದು. ಮಹಾರಾಷ್ಟ್ರ ಸರ್ಕಾರ ಬಜೆಟ್ ನಲ್ಲಿ 10,000 ಹೆಕ್ಟೇರ್ ಪ್ರದೇಶದಲ್ಲಿ ಬಿದಿರು ಬೆಳೆಯುವ ಬೆಳೆಗಾರರಿಗೆ ಪ್ರೋತ್ಸಾಹ ಧನ ನೀಡುವ ಯೋಜನೆ ಘೋಷಿಸಿ ಜಾರಿಗೆ ತರುತ್ತಿದೆ. ಅದೇ ಮಾದರಿಯನ್ನು ರಾಜ್ಯದಲ್ಲಿ ಅನುಸರಿಸಲು ಚರ್ಚೆ ನಡೆದಿದೆ.
ಜಲಾನಯನ ಪ್ರದೇಶ, ಅಚ್ಚು ಕಟ್ಟು ಪ್ರದೇಶ, ಸರ್ಕಾರಿ ಬಂಜರು ಭೂಮಿಗಳಲ್ಲಿ ಬಿದಿರು ಬೆಳೆಯಲು ವಿಶೇಷ ಯೋಜನೆ ರೂಪಿಸುವ ಬಗ್ಗೆ ಕೃಷಿ, ಅರಣ್ಯ, ಜಲಾನಯನ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ತಜ್ಞರು ಚರ್ಚೆ ನಡೆಸಿದ್ದಾರೆ. ಸರ್ಕಾರಕ್ಕೆ ಅನೇಕ ಶಿಫಾರಸುಗಳನ್ನು ನೀಡಲಾಗಿದ್ದು, ಶೀಘ್ರದಲ್ಲಿ ಅವುಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.