ಗರ್ಭಾವಸ್ಥೆಯು ಮಹಿಳೆಯರ ಪಾಲಿಗೆ ಒಂದು ಸೂಕ್ಷ್ಮ ಅವಧಿಯಾಗಿದೆ. ಈ ಸಮಯದಲ್ಲಿ ಗರ್ಭಿಣಿಯರು ತಮ್ಮ ಆಹಾರ ಮತ್ತು ಜೀವನಶೈಲಿಯ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಗರ್ಭಾವಸ್ಥೆಯಲ್ಲಿ ಕೆಫೀನ್ ತೆಗೆದುಕೊಳ್ಳುವುದು ಸರಿಯೋ ತಪ್ಪೋ ಎಂಬುದು ಚರ್ಚೆಯ ವಿಷಯವಾಗಿದೆ. ಕಾಫಿ, ಚಹಾ ಮತ್ತು ಕೆಲವು ತಂಪು ಪಾನೀಯಗಳಲ್ಲಿ ಕೆಫೀನ್ ಇರುತ್ತದೆ.
ಅನೇಕ ಸಂಶೋಧನೆಗಳ ಪ್ರಕಾರ ಗರ್ಭಾವಸ್ಥೆಯಲ್ಲಿ ಅತಿಯಾದ ಕೆಫೀನ್ ಸೇವನೆಯು ಭ್ರೂಣ ಮತ್ತು ಮಗುವಿನ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಗರ್ಭಿಣಿಯರು ದಿನಕ್ಕೆ 200 ಮಿಲಿ ಗ್ರಾಂನಷ್ಟು ಪ್ರಮಾಣದಲ್ಲಿ ಕಾಫಿ ಕುಡಿಯುವುದು ಸುರಕ್ಷಿತ. ಅದಕ್ಕಿಂತ ಹೆಚ್ಚು ಸೇವನೆ ಮಾಡುವುದು ಅಪಾಯಕಾರಿ.
ಗರ್ಭಾವಸ್ಥೆಯಲ್ಲಿ ಸೀಮಿತ ಪ್ರಮಾಣದ ಕೆಫೀನ್ ಸೇವನೆಯು ಗರ್ಭಿಣಿಯರಿಗೆ ಶಕ್ತಿ ನೀಡುತ್ತದೆ ಮತ್ತು ಆಯಾಸವನ್ನು ಕಡಿಮೆ ಮಾಡುತ್ತದೆ. ಆದರೆ ಹೆಚ್ಚು ಕೆಫೀನ್ ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ಕಾಫಿಯಲ್ಲಿ ಕೆಫೀನ್ ಇದ್ದು ಅದು ಸಹ ಉತ್ತೇಜಕವಾಗಿದೆ. ಹೆಚ್ಚುವರಿ ಕೆಫೀನ್ ಸೇವನೆ ಭ್ರೂಣದ ಹೃದಯ ಬಡಿತವನ್ನು ಹೆಚ್ಚಿಸುತ್ತದೆ. ಇದು ಮಗುವಿನ ಬೆಳವಣಿಗೆಗೆ ಅಡ್ಡಿಯಾಗಬಹುದು. ಅತಿಯಾದ ಕೆಫೀನ್ ಸೇವನೆಯಿಂದ ಗರ್ಭಪಾತದ ಅಪಾಯ ಹೆಚ್ಚಾಗುತ್ತದೆ.
ಕಾಫಿ
ಕಾಫಿಯಲ್ಲಿ ಕೆಫೀನ್ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಒಂದು ಕಪ್ ಕಾಫಿಯಲ್ಲಿ ಸುಮಾರು 80-100 ಮಿಗ್ರಾಂ ಕೆಫೀನ್ ಇರುತ್ತದೆ. ಆದ್ದರಿಂದ, ಗರ್ಭಾವಸ್ಥೆಯಲ್ಲಿ ಕೇವಲ ಒಂದು ಅಥವಾ ಎರಡು ಕಪ್ ಕಾಫಿ ತೆಗೆದುಕೊಳ್ಳುವುದು ಸುರಕ್ಷಿತವೆಂದು ಪರಿಗಣಿಸಲಾಗಿದೆ, ಇದಕ್ಕಿಂತ ಹೆಚ್ಚು ಕುಡಿಯುವುದು ಅಪಾಯಕಾರಿ.
ಚಹಾ
ಚಹಾ, ಗ್ರೀನ್ ಟೀ, ಬ್ಲಾಕ್ ಟೀ ಹೀಗೆ ಈ ವೆರೈಟಿ ಚಹಾಗಳಲ್ಲಿಯೂ ಕೆಫೀನ್ ಇರುತ್ತದೆ. ಆದರೆ ಕಾಫಿಗೆ ಹೋಲಿಸಿದರೆ ಇವುಗಳಲ್ಲಿ ಕೆಫೀನ್ ಪ್ರಮಾಣ ಕಡಿಮೆ. ಹಾಗಂತ ಚಹಾವನ್ನು ಕೂಡ ಮಿತಿಮೀರಿ ಕುಡಿಯಬಾರದು.
ಎನರ್ಜಿ ಡ್ರಿಂಕ್ಸ್
ರೆಡ್ ಬುಲ್, ಮೌಂಟೇನ್ ಡ್ಯೂ ಮುಂತಾದ ಎನರ್ಜಿ ಡ್ರಿಂಕ್ಸ್‌ಗಳಲ್ಲಿಯೂ ಕೆಫೀನ್ ಇರುತ್ತದೆ. ಈ ಪಾನೀಯಗಳು ತ್ರಾಣ ಮತ್ತು ಶಕ್ತಿಯನ್ನು ನೀಡುತ್ತವೆ ಎಂದು ಹೇಳಲಾಗುತ್ತದೆ. ಆದರೆ ಗರ್ಭಾವಸ್ಥೆಯಲ್ಲಿ ಈ ಪಾನೀಯಗಳನ್ನು ಸೇವಿಸಬಾರದು.
ತಂಪು ಪಾನೀಯ
ಕೋಲ್ಡ್ ಕಾಫಿ, ಐಸ್ಡ್ ಟೀ ಮುಂತಾದ ತಂಪು ಪಾನೀಯಗಳು ಕೆಫೀನ್ ಅನ್ನು ಹೊಂದಿರುತ್ತವೆ. ಇವನ್ನೆಲ್ಲ ಗರ್ಭಿಣಿಯರು ಕುಡಿಯಬಾರದು. ಈ ಪಾನೀಯಗಳು ಗರ್ಭಿಣಿ ಹಾಗೂ ಹೊಟ್ಟೆಯಲ್ಲಿರುವ ಮಗು ಇಬ್ಬರಿಗೂ ಅಪಾಯಕಾರಿ.