ಹೋಂಡಾ ಕಾರ್ಸ್ ಇಂಡಿಯಾ ತನ್ನ ಹೊಸ ಮಧ್ಯಮ ಗಾತ್ರದ ಎಸ್‌ಯುವಿ, ಹೋಂಡಾ ಎಲಿವೇಟ್ ಮಾರಾಟದಲ್ಲಿ ದಾಖಲೆ ಮಾಡಿದೆ.
ಹೋಂಡಾ ಎಲಿವೇಟ್ ಮಾರಾಟ ಸೆಪ್ಟೆಂಬರ್ 2023 ರಲ್ಲಿ ಪ್ರಾರಂಭವಾದಾಗಿನಿಂದ ಕೇವಲ 100 ದಿನಗಳಲ್ಲಿ 20,000 ಯುನಿಟ್‌ಗಳ ಮಾರಾಟದ ಮೈಲಿಗಲ್ಲನ್ನು ಸಾಧಿಸಿದೆ ಎಂದು ಘೋಷಿಸಿದೆ. ಹೋಂಡಾ ಎಲಿವೇಟ್ ಕಳೆದ 3 ತಿಂಗಳ ಅವಧಿಯಲ್ಲಿ ಹೋಂಡಾದ ಮಾರಾಟದಲ್ಲಿ 50 ಪ್ರತಿಶತಕ್ಕೂ ಹೆಚ್ಚು ಪಾಲು ಹೊಂದಿದೆ. ಇದರಿಂದಾಗಿ ಸೆಪ್ಟೆಂಬರ್ ನಿಂದ ನವೆಂಬರ್ ಅವಧಿಯಲ್ಲಿ 11 ಪ್ರತಿಶತದಷ್ಟು ಕಂಪನಿ ಬೆಳವಣಿಗೆ ಕಂಡಿದೆ.
ಹೋಂಡಾ ಕಾರ್ಸ್ ಇಂಡಿಯಾದ ಮಾರ್ಕೆಟಿಂಗ್ ಮತ್ತು ಮಾರಾಟದ ನಿರ್ದೇಶಕ ಯುಯಿಚಿ ಮುರಾಟಾ, “ನಮ್ಮ ನಿರೀಕ್ಷೆಗಳನ್ನು ಮೀರಿಸಿರುವ ಹೋಂಡಾ ಎಲಿವೇಟ್‌ನ ಗಮನಾರ್ಹ ಯಶಸ್ಸು ನಮ್ಮನ್ನು ರೋಮಾಂಚನಗೊಳಿಸಿದೆ. ಬಿಡುಗಡೆಯಾದ ಮೊದಲ 100 ದಿನಗಳಲ್ಲಿ ಎಲಿವೇಟ್‌ನ 20,000 ಮಾರಾಟದ ಮೈಲಿಗಲ್ಲು ನಮಗೆ ಹೆಮ್ಮೆಯ ಕ್ಷಣವಾಗಿದೆ. ಮತ್ತು ನಮ್ಮ ಮೌಲ್ಯಯುತ ಗ್ರಾಹಕರ ನಂಬಿಕೆ ಮತ್ತು ಆದ್ಯತೆಯನ್ನು ಪ್ರತಿಬಿಂಬಿಸುತ್ತದೆ. ಇದು ನಮ್ಮನ್ನು ಉದ್ಯಮದಲ್ಲಿ ಗಮನಾರ್ಹ ಸ್ಪರ್ಧಿಯನ್ನಾಗಿ ಮಾಡುತ್ತದೆ. ಇದಲ್ಲದೆ, ನಮ್ಮ ಗ್ರಾಹಕರಿಗೆ ಸಾಧ್ಯವಾದಷ್ಟು ಬೇಗ ಸೇವೆ ಸಲ್ಲಿಸಲು ನಾವು ಎಲಿವೇಟ್‌ನ ಉತ್ಪಾದನೆಯನ್ನು ಹೆಚ್ಚು ಮಾಡಿದ್ದೇವೆ” ಎಂದು ಸಂತಸ ಹಂಚಿಕೊಂಡಿದ್ದಾರೆ.
ಎಲಿವೇಟ್ 10,99,900 ರೂ. (ಎಕ್ಸ್-ಶೋ ರೂಂ) ನಿಂದ ರೂ 15,99,900 ರೂಪಾಯಿವರೆಗಿನವರೆಗಿನ ಬೆಲೆಯಲ್ಲಿ ಲಭ್ಯವಿದೆ. ಈ ಪರಿಚಯಾತ್ಮಕ ಬೆಲೆಗಳು ಡಿಸೆಂಬರ್ 2023 ರ ಅಂತ್ಯದವರೆಗೆ ಮಾನ್ಯವಾಗಿರುತ್ತವೆ.
ಎಲಿವೇಟ್ ಅನ್ನು ಜಾಗತಿಕವಾಗಿ ತಯಾರಿಸಿ ಮಾರಾಟ ಮಾಡಿದ ಮೊದಲ ದೇಶ ಭಾರತ. ಜಾಗತಿಕವಾಗಿ SUV ಗಳಿಗೆ ದೃಢವಾದ ಬೇಡಿಕೆಯನ್ನು ಪೂರೈಸುವ ಮೂಲಕ, ಪ್ರಪಂಚದ ಇತರ ಭಾಗಗಳಿಗೆ ಹೊಸ ಮಾದರಿಯ ಪ್ರಮುಖ ರಫ್ತು ಕೇಂದ್ರವಾಗಿ ಭಾರತವನ್ನು ಮಾಡಲು ಕಂಪನಿಯು ಗುರಿಯನ್ನು ಹೊಂದಿದೆ.