ದಾವಣಗೆರೆ: ಹಿಂದೂ ಗೆಳೆಯನೊಬ್ಬ ಮುಸ್ಲಿಂ ಸಮುದಾಯಕ್ಕೆ ಸೇರಿದ ಪ್ರಾಣ ಸ್ನೇಹಿತನ ಆರೋಗ್ಯಕ್ಕಾಗಿ ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ಹರಕೆ ಹೊತ್ತು ತುಲಾಭಾರ ನೆರವೇಸಿರುವ ಅಪರೂಪದ ಹಾಗೂ ಕೋಮುಸೌಹಾರ್ದತೆಗೆ ಮಾದರಿಯಾದ ಘಟನೆ ನಡೆದಿದೆ.
ಅರುಣ್ ಕುಮಾರ್ ಹಾಗೂ ವಕೀಲ ಅನಿಸ್ ಪಾಷ ಹಲವು ವರ್ಷಗಳ ಸ್ನೇಹಿತರು. ಅರುಣ್ ಕುಮಾರ್ ಅವರಿಗೆ ಸಂಬಂಧಿಸಿದ ಕೇಸ್ ಒಂದರ ಪರ ವಕಾಲತ್ತು ವಹಿಸಿ ವಕೀಲ ಅನಿಸ್ ಪಾಷ ಗೆದ್ದಿದ್ದರು. ಹೀಗೆ ಆರಂಭವಾದ ಇಬ್ಬರ ಸ್ನೇಹ, ಗೆಳೆಯನ ಜೀವ ರಕ್ಷಣೆಗಾಗಿ ದೇವರಲ್ಲಿ ಹರಕೆ ಹೊತ್ತು ತೀರಿಸಿದ್ದಾರೆ.
ವಕೀಲ ಅನಿಸ್ ಪಾಷಾ ಕೊರೊನಾ ಸಂದರ್ಭದಲ್ಲಿ ಹೃದಯಸಂಬಧಿ ಕಾಯಿಲೆಯಿಂದ ಬಳಲುತ್ತಿದ್ದರು. ಅವರು ಗುಣಮುಖರಾಗಲಿ ಎಂದು ಅರುಣ್ ಕುಮಾರ್ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಗೆ ತುಲಾಭಾರ ಹರಕೆ ಹೊತ್ತಿದ್ದರು. ಈಗ ಅನಿಸ್ ಪಾಷ ಗುಣಮುಖರಾಗಿರುವ ಹಿನ್ನೆಲೆಯಲ್ಲಿ ಅನಿಸ್ ಪಾಷಾ ಹಾಗೂ ಅರುಣ್ ಕುಮಾರ್ ವಾರದ ಹಿಂದಷ್ಟೇ ಧರ್ಮಸ್ಥಳಕ್ಕೆ ತೆರಳಿ ಹರಕೆ ತೀರಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ವಕೀಲ ಅನಿಸ್ ಪಾಷ, ನನ್ನ ವೃತ್ತಿ ಜೀವನದಲ್ಲಿ ನಾನು ಸಾಕಷ್ಟು ಕಕ್ಷಿದಾರರನ್ನು ನೋಡಿದ್ದೇನೆ. ಆದರೆ ಅರುಣ್ ಕುಮಾರ್ ನನಗೆ ಅತ್ಯಾಪ್ತರಾದರು. ಇಬ್ಬರು ಕುಟುಂಬ ಸ್ನೇಹಿತರಾಗಿದ್ದೇವೆ. 2021ರಲ್ಲಿ ನನಗೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿತು. ತಪಾಸಣೆ ನಡೆಸಿದಾಗ ಹೃದಯದ ರಕ್ತನಾಳ ಎರಡೂ ಕಡೆ ಬ್ಲಾಕ್ ಆಗಿದೆ ಹಾಗಾಗಿ ಸ್ಟಂಟ್ ಅಳವಡಿಸಬೇಕು ಎಂದರು. ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದೆ. ಈ ಸಂದರ್ಭದಲ್ಲಿ ಗೆಳೆಯ ಅರುಣ್ ಕುಮಾರ್ ನನ್ನ ಆರೋಗ್ಯಕ್ಕಾಗಿ ಹರಕೆ ಹೊತ್ತಿದ್ದರು. ಹಾಗಾಗಿ ಧರ್ಮಸ್ಥಳಕ್ಕೆ ತೆರಳಿ ಹರಕೆ ತೀರಿಸಿ ಬಂದಿದ್ದೇವೆ ಎಂದರು.
ಇದೇ ವೇಳೆ ಅರುಣ ಕುಮಾರ್, ಪ್ರಕರಣವೊಂದರಲ್ಲಿ ಯಾರಿಂದಲೂ ನ್ಯಾಯ ಸಿಗದಿದ್ದಾಗ ವಕೀಲ ಅನಿಸ್ ಪಾಷ ಅವರು ನನಗೆ ನ್ಯಾಯ ಕೊಡಿಸಿದರು. ಅವರು ವಯಸ್ಸಿನಲ್ಲಿ ಹಿರಿಯರಾದರೂ ನಮ್ಮ ಸ್ನೇಹಕ್ಕೆ ಅಡ್ಡಿಯಾಗಿಲ್ಲ. ಬಡವರಿಗೆ ಉಚಿತ ಸೇವೆ ನೀಡುವ ಅವರು ಚೆನ್ನಾಗಿ ಇರಬೇಕು. ಅವರ ಆರೋಗ್ಯಕ್ಕಾಗಿ ಮಾಡಿಕೊಂಡಿದ್ದ ಹರಕೆಯನ್ನು ತೀರಿಸಿದ್ದೇವೆ ಎಂದು ಹೇಳಿದ್ದಾರೆ.