ಶ್ರೀರಾಮ್ ಕ್ಯಾಪಿಟಲ್ ಮಹಾರಾಜ ಟ್ರೋಫಿ ಸೀಸನ್ 3 ಇದೇ ಆಗಸ್ಟ್ 15 ರಿಂದ ಆರಂಭವಾಗಲಿದ್ದು, ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್ ಹಾಗೂ ಐಪಿಎಲ್ ನಲ್ಲೂ ಹೆಸರು ಮಾಡಿದ್ದ ಮನೀಶ್ ಪಾಂಡೆ, ಮಯಾಂಕ್ ಅಗರ್ವಾಲ್, ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್, ದೇವದತ್ ಪಡಿಕ್ಕಲ್ ಹಾಗೂ ಸುಚಿತ್ ಸೇರಿದಂತೆ ಹಲವಾರು ಕ್ರಿಕೆಟಿಗರು ಈ ಲೀಗ್ ನಲ್ಲಿ ಭಾಗವಹಿಸಲಿದ್ದು ಮನರಂಜನೆಯ ರಸದೌತಣ ಪಡೆಯಲು ಕ್ರೀಡಾಭಿಮಾನಿಗಳು ಸಜ್ಜಾಗಿದ್ದಾರೆ.
ಮಹಾರಾಜ ಟ್ರೋಫಿ ksca ಟಿ20 ಯಲ್ಲಿ ಒಟ್ಟಾರೆ ಆರು ತಂಡಗಳು ಸ್ಪರ್ಧಿಸಲಿದ್ದು, ಆಗಸ್ಟ್ 15 ರಿಂದ 29 ರ ವರೆಗೆ ಲೀಗ್ ಹಂತದ ಪಂದ್ಯಗಳು ನಡೆಯಲಿವೆ. ಆಗಸ್ಟ್ 30- 31 ರಂದು ಸೆಮಿಫೈನಲ್ ಇದ್ದರೆ, ಸೆಪ್ಟಂಬರ್ 1 ಕ್ಕೆ ಫೈನಲ್ ನಡೆಯಲಿದೆ. ವೇಳಾಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದ್ದು, ಮೊದಲ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಗುಲ್ಬರ್ಗ ಮೈಸ್ಟಿಕ್ಸ್ ತಂಡ ಮುಖಾಮುಖಿಯಾಗಲಿವೆ.