ಸಾಮಾನ್ಯವಾಗಿ ಉದ್ದನೆಯ ಉಗುರು ಬೆಳೆಸಿ ಅದನ್ನು ಅಂದಗೊಳಿಸುವ ಕನಸು ಎಲ್ಲಾ ಮಹಿಳೆಯರಿಗೂ ಇರುತ್ತದೆ. ಆದರೆ ಅದು ಗೃಹಿಣಿಯರಿಗೆ ಮರೀಚಿಕೆಯಾಗಿ ಉಳಿಯುವುದೇ ಹೆಚ್ಚು. ಮನೆಯೊಳಗಿನ ಕೆಲಸದ ಗಡಿಬಿಡಿಯಲ್ಲಿ ಉಗುರು ತುಂಡಾಗುವುದೇ ಹೆಚ್ಚು. ಅಥವಾ ಒಗರಿನಂಥ ಬಣ್ಣಗಳಿಂದ ಅವುಗಳ ರೂಪ ಕೆಡುವುದೇ ಹೆಚ್ಚು. ಇದರ ನಿವಾರಣೆಗೆ ಹೀಗೆ ಮಾಡಿ.
ಬೀಟ್ ರೂಟ್, ಬಾಳೆಕಾಯಿಯಂಥ ತರಕಾರಿಗಳನ್ನು ಕತ್ತರಿಸುವಾಗ ಕೈಗೆ ಹ್ಯಾಂಡ್ ಗ್ಲೌಸ್ ಬಳಸಿ. ಆರಂಭದ ಕೆಲ ದಿನಗಳಲ್ಲಿ ಇದು ಕಷ್ಟ ಎನಿಸಿದರೂ ಕ್ರಮೇಣ ಅಭ್ಯಾಸವಾಗುತ್ತದೆ. ಮನೆ ಕೆಲಸ ಮುಗಿದ ಬಳಿಕ ಗ್ಲೌಸ್ ತೆಗೆದು ಕೈಗಳನ್ನು ಸ್ವಚ್ಛವಾಗಿ ತೊಳೆಯಿರಿ.
ಕೈ ತೊಳೆಯುವಾಗ ಅತಿ ಬಿಸಿ ಅಥವಾ ತೀರಾ ತಣ್ಣಗಾದ ನೀರಿನ ಬಳಕೆ ಬೇಡ. ಉಗುರು ಬೆಚ್ಚಗಿನ ನೀರಿನಲ್ಲಿ ಕೈತೊಳೆದು ಹ್ಯಾಂಡ್ ಕ್ರೀಮ್ ಹಚ್ಚಿ.
ಅಡುಗೆ ಮನೆಯಲ್ಲಿ ಲಿಂಬೆಹಣ್ಣು ಹಿಂಡಿದ ಬಳಿಕ ಉಳಿಯುವ ತುಂಡಿನಿಂದ ಉಗುರುಗಳಿಗೆ ಮಸಾಜ್ ಮಾಡಿ. ಇದರಿಂದ ಉಗುರಿನ ಸಂದಿನಲ್ಲಿ ಉಳಿದ ಕೊಳೆ ತೊಲಗಿ ಸ್ವಚ್ಛವಾಗುತ್ತದೆ.
ನೈಲ್ ಪಾಲಿಶ್ ಖರೀದಿಸುವಾಗ ಗುಣಮಟ್ಟದ ಕಡೆಗೂ ಗಮನ ಕೊಡಿ. ಉತ್ತಮ ಬ್ರಾಂಡ್ ನ ಬಣ್ಣಗಳು ನಿಮ್ಮ ಉಗುರು ಮತ್ತಷ್ಟು ಆಕರ್ಷಕವಾಗಿ ಕಾಣುವಂತೆ ಮಾಡುತ್ತವೆ.
ಬಣ್ಣ ಹಚ್ಚುವ ಮುನ್ನ ಉಗುರಿಗೆ ಬೇಸ್ ಕೋಟ್ ಹಾಕಿ. ಇವು ಉಗುರಿನ ಬಣ್ಣ ಬದಲಾಗಿದ್ದರೆ ಅದನ್ನು ಮರೆಮಾಚುತ್ತದೆ. ನೇಲ್ ಪಾಲಿಶ್ ರಿಮೂವರ್ ಬಳಸಿಯೇ ಹಳೆಯ ಬಣ್ಣ ತೆಗೆಯಿರಿ.
ಕೆಲವೊಮ್ಮೆ ಪ್ರೊಟೀನ್ ಮತ್ತು ಕ್ಯಾಲ್ಸಿಯಂ ಕೊರತೆಯಿಂದ ಉಗುರು ತುಂಡಾಗುತ್ತಿರಬಹುದು. ಹೀಗಾಗಿ ಸೇವಿಸುವ ಆಹಾರದಲ್ಲಿ ಎಲ್ಲಾ ರೀತಿಯ ಪೌಷ್ಟಿಕಾಂಶಗಳು ಮತ್ತು ವಿಟಮಿನ್ ಗಳು ಇರುವಂತೆ ನೋಡಿಕೊಳ್ಳಿ.