ಮಾನಸಿಕ ಅಸ್ವಸ್ಥತೆ ಅನ್ನೋದು ದುರ್ಬಲ ಮಾನಸಿಕ ಆರೋಗ್ಯ ಪರಿಸ್ಥಿತಿ. ಇದು ಸುಲಭವಾಗಿ ಗುರುತಿಸಲ್ಪಡುವುದಿಲ್ಲ. ಖಿನ್ನತೆ ಮತ್ತು ಆತಂಕಕ್ಕೆ ಸಾಮಾನ್ಯವಾಗಿ ಯಾವುದೇ ಸ್ಪಷ್ಟ ಲಕ್ಷಣಗಳಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಮಾನಸಿಕ ಆರೋಗ್ಯ ಸಮಸ್ಯೆಗಳು ಆತ್ಮಹತ್ಯೆಗೆ ಪ್ರಮುಖ ಕಾರಣವಾಗಿದೆ. ಆರಂಭಿಕ ಲಕ್ಷಣಗಳನ್ನು ಗುರುತಿಸುವುದು ಮತ್ತು ವೈದ್ಯರೊಂದಿಗೆ ಸಮಾಲೋಚಿಸುವ ಮೂಲಕ ಮೆಂಟಲ್ ಹೆಲ್ತ್ ಪ್ರಾಬ್ಲೆಮ್‌ಗೆ ತುತ್ತಾಗಿರುವವರ ಜೀವವನ್ನು ಉಳಿಸಬಹುದು. ನಾವು ನಿರ್ಲಕ್ಷಿಸಬಾರದು ಎನ್ನುವಂತ ಮಾನಸಿಕ ಅನಾರೋಗ್ಯದ 12 ಲಕ್ಷಣಗಳನ್ನು ಪಟ್ಟಿ ಮಾಡೋಣ.
1. ಹೊಟ್ಟೆ ನೋವು: ಪದೇ ಪದೇ ಹೊಟ್ಟೆ ನೋವು ಬರುವುದು, ಆಸಿಡಿಟಿ, ಅಜೀರ್ಣ ಕೂಡ ಮಾನಸಿಕ ಅನಾರೋಗ್ಯದ ಪ್ರಮುಖ ಲಕ್ಷಣ. ಹೊಟ್ಟೆಯಲ್ಲಿ ಗಂಟಾಗಿದೆ ಎಂಬ ಆತಂಕ ಸಹ ಕಾಡಬಹುದು. ಯಾಕಂದ್ರೆ ನಿಮ್ಮ ಕರುಳು ಮತ್ತು ಮೆದುಳಿಗೆ ಆಳವಾದ ಸಂಪರ್ಕವಿದೆ. ಪ್ರತಿ ಬಾರಿ ನೀವು ಆತಂಕಕ್ಕೊಳಗಾದಾಗ ಅಥವಾ ಒತ್ತಡಕ್ಕೊಳಗಾದಾಗ, ಮೆದುಳು ನಿಮ್ಮ ಕರುಳಿಗೆ ನಿಧಾನಗೊಳಿಸಲು ಸಂಕೇತಗಳನ್ನು ಕಳುಹಿಸುತ್ತದೆ. ಮೆದುಳು ಜೀರ್ಣಕ್ರಿಯೆಯನ್ನು ತಡೆಹಿಡಿಯುತ್ತದೆ.
2. ದೀರ್ಘಕಾಲದ ನೋವು: ನಿಮ್ಮ ಮಾನಸಿಕ ಆರೋಗ್ಯ ಸ್ಥಿತಿಯನ್ನು ಅಳೆಯಲು ಕರುಳು ಮಾಪನವಿದ್ದಂತೆ. ನೀವು ಈ ಚಿಹ್ನೆಗಳನ್ನು ನಿರ್ಲಕ್ಷಿಸಿದರೆ ದೇಹದ ಉಳಿದ ಭಾಗಗಳು ಶೀಘ್ರದಲ್ಲೇ ಪರಿಣಾಮಗಳನ್ನು ಅನುಭವಿಸಬಹುದು. ಖಿನ್ನತೆಯೊಂದಿಗೆ ವಾಸಿಸುವ ಜನರು ದೀರ್ಘಕಾಲದ ನೋವನ್ನು ಪಡೆಯುವ ಸಾಧ್ಯತೆ ಮೂರು ಪಟ್ಟು ಹೆಚ್ಚಾಗಿರುತ್ತದೆ.
3. ಪುನರಾವರ್ತಿತ ನಡವಳಿಕೆ ಅಥವಾ ಸಂಕೋಚನಗಳು: ಯಾವಾಗಲೂ ಕಾಲು ಅಲ್ಲಾಡಿಸುತ್ತ, ವೇಗವಾಗಿ ಮಾತನಾಡುವುದು, ಉಗುರು ಕಚ್ಚುವ ನಡವಳಿಕೆ ಆತಂಕ ಮತ್ತು ಒತ್ತಡದ ಸಂಕೇತವಾಗಿದೆ. ಆತಂಕ ಹೊಂದಿರುವ ಜನರು ಹೆಚ್ಚಿನ ಸಮಯ ಪ್ರಕ್ಷುಬ್ಧತೆಯನ್ನು ಅನುಭವಿಸುತ್ತಾರೆ. ವೈದ್ಯಕೀಯ ಭಾಷೆಯಲ್ಲಿ, ಇದನ್ನು ಸೈಕೋಮೋಟರ್ ಆಂದೋಲನ ಎಂದು ಕರೆಯಲಾಗುತ್ತದೆ. ಈ ಚಡಪಡಿಕೆಯು ನಿದ್ರಾ ಭಂಗ ಮತ್ತು ಆಯಾಸವನ್ನೂ ಉಂಟುಮಾಡುತ್ತದೆ.
4. ಅಸ್ವಾಭಾವಿಕವಾಗಿ ನಿಷ್ಕ್ರಿಯ : ಪ್ರತಿಯೊಬ್ಬ ವ್ಯಕ್ತಿಯು ವಿಶಿಷ್ಟವಾದ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಕೆಲವರು ಶಾಂತವಾಗಿ, ತಮ್ಮಷ್ಟಕ್ಕೆ ತಾವಿದ್ದರೆ ಇನ್ನು ಕೆಲವರು ಹೊರಗೆ ಹೋಗಲು ಮತ್ತು ಜನರೊಂದಿಗೆ ಬೆರೆಯಲು ಇಷ್ಟಪಡುತ್ತಾರೆ. ಅಸ್ವಾಭಾವಿಕವಾಗಿ ನಿಷ್ಕ್ರಿಯರಾಗಿದ್ದರೆ ಅದು ಖಿನ್ನತೆಯ ಸಂಕೇತವಾಗಿರಬಹುದು. “ಸ್ಮೈಲಿಂಗ್ ಡಿಪ್ರೆಶನ್” ಎಂದು ಕರೆಯಲ್ಪಡುವ ಖಿನ್ನತೆಯಿರುವ ಜನರು ನಿಷ್ಕ್ರಿಯ ಆತ್ಮಹತ್ಯಾ ಆಲೋಚನೆಗಳನ್ನು ಹೊಂದಿರುವಾಗ ಹೊರಗೆ ಸಂತೋಷದಿಂದ ಇರುವಂತೆ ಕಾಣಿಸಿಕೊಳ್ಳಬಹುದು. ಈ ರೀತಿಯ ಖಿನ್ನತೆಯನ್ನು ಗುರುತಿಸುವುದು ಇನ್ನೂ ಕಷ್ಟ.
5. ದುರ್ಬಲ ರೋಗನಿರೋಧಕ ಶಕ್ತಿ: ಆತಂಕ ಮತ್ತು ಒತ್ತಡದಿಂದ ಬದುಕುವ ಜನರು ಸುಲಭವಾಗಿ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಒಬ್ಬ ವ್ಯಕ್ತಿ ಚಿಂತಿಸಿದಾಗಲೆಲ್ಲಾ ಅವರ ಮೆದುಳು ಪ್ರತಿರಕ್ಷಣಾ ವ್ಯವಸ್ಥೆಗೆ ಸಂಕೇತಗಳನ್ನು ಕಳುಹಿಸುತ್ತದೆ, ಅದು ಒಟ್ಟಾರೆ ರೋಗನಿರೋಧಕ ಶಕ್ತಿಯನ್ನು ನಿಧಾನವಾಗಿ ನಿಗ್ರಹಿಸುತ್ತದೆ. ಇದು ಹೈಪರ್ ಆಕ್ಟಿವ್ ಆಗಲು ಕಾರಣವಾಗಬಹುದು, ರುಮಟಾಯ್ಡ್ ಆರ್ಥರೈಟಿಸ್‌ನಂತಹ ಕಾಯಿಲೆಗೂ ಮೂಲವಾಗಬಹುದು.
6. ನಾಟಕೀಯ ಮನಸ್ಥಿತಿ ಬದಲಾವಣೆ: ಸನ್ನಿವೇಶಗಳಿಗೆ ಅನುಗುಣವಾಗಿ ಕೋಪ, ದುಃಖ ಅಥವಾ ಭಾವನಾತ್ಮಕತೆಯನ್ನು ಅನುಭವಿಸದೇ ಕೋಪ ಅಥವಾ ಅಳು ಮುಂತಾದ ಅಸಮಂಜಸವಾದ ನಾಟಕೀಯ ಭಾವನಾತ್ಮಕ ಪ್ರಕೋಪಗಳು ಖಿನ್ನತೆ ಅಥವಾ ಇತರ ಮಾನಸಿಕ ಅಸ್ವಸ್ಥತೆಯ ಬಗ್ಗೆ ಸುಳಿವು ನೀಡುತ್ತವೆ.
7. ನಿರಂತರ ದುಃಖ: ದುಃಖ, ಕಣ್ಣೀರು ನಿರಂತರವಾಗಿದ್ದರೆ ಅವರು ಖಿನ್ನತೆಯನ್ನು ಎದುರಿಸುತ್ತಿರಬಹುದು. ಪರಿಪೂರ್ಣ ಜೀವನದಲ್ಲಿ ಎಲ್ಲವೂ ಚೆನ್ನಾಗಿ ನಡೆಯುತ್ತಿದ್ದರೂ ನೀವು ಖಿನ್ನತೆಗೆ ಒಳಗಾಗಿದ್ದರೆ ದುಃಖವನ್ನು ಅನುಭವಿಸಬಹುದು. ಏಕೆಂದರೆ ಖಿನ್ನತೆಯು ನಿಮ್ಮ ನಿಯಂತ್ರಣದಲ್ಲಿಲ್ಲದ ಕ್ಲಿನಿಕಲ್ ಸ್ಥಿತಿಯಾಗಿದೆ.
8. ವಿವರಿಸಲಾಗದ ತಪ್ಪಿತಸ್ಥ ಭಾವನೆಯೊಂದಿಗೆ ಬದುಕುವುದು: ತನ್ನನ್ನು ತಾನೇ ಟೀಕಿಸಿಕೊಳ್ಳುವುದು, ಸ್ವಾಭಿಮಾನದ ಕೊರತೆ ಅಥವಾ ನಿಷ್ಪ್ರಯೋಜಕತೆಯ ಭಾವನೆಗಳನ್ನು ಹೊಂದಿರುವುದು, ಎಲ್ಲದಕ್ಕೂ ತನ್ನನ್ನು ತಾನೇ ದೂಷಿಸುವುದು ಖಿನ್ನತೆಯಂತಹ ಮಾನಸಿಕ ಅಸ್ವಸ್ಥತೆಯ ಲಕ್ಷಣಗಳಾಗಿರಬಹುದು. ನಿಮ್ಮ ಕುಟುಂಬದ ಸದಸ್ಯರು ಅಥವಾ ಸ್ನೇಹಿತರಲ್ಲಿ ಯಾರಾದರೂ ನಿರಂತರ ತಪ್ಪಿತಸ್ಥ ಭಾವನೆಯಿಂದ ಬದುಕುತ್ತಿರುವುದನ್ನು ನೀವು ಗಮನಿಸಿದರೆ ಮತ್ತು ಆತ್ಮಹತ್ಯೆಯ ಆಲೋಚನೆಗಳನ್ನು ಹೊಂದಿರುವ ಬಗ್ಗೆ ಮಾತನಾಡುತ್ತಿದ್ದರೆ, ಅವರನ್ನು ಲಘುವಾಗಿ ಪರಿಗಣಿಸಬೇಡಿ. ಅವರಿಗೆ ತಕ್ಷಣದ ವೈದ್ಯಕೀಯ ಸಹಾಯ ಬೇಕಾಗಬಹುದು.
9. ಎಲ್ಲದರ ಬಗ್ಗೆ ಚಿಂತೆ: ಕೆಲವು ಸಂದರ್ಭಗಳಲ್ಲಿ ಚಿಂತೆ ಮಾಡುವುದು ಸಹಜ, ಆದರೆ ಆತಂಕವು ದಿನನಿತ್ಯದ ಜೀವನದ ಭಾಗವಾಗಿದ್ದರೆ ಮತ್ತು ನಮ್ಮ ದಿನನಿತ್ಯದ ಅಸ್ತಿತ್ವದ ಮೇಲೆ ಪರಿಣಾಮ ಬೀರಿದರೆ, ಅದು ಮಾನಸಿಕ ಅನಾರೋಗ್ಯ ಸ್ಥಿತಿಯ ಸಂಕೇತವಾಗಿರಬಹುದು. ಆತಂಕದ ಕೆಲವು ಲಕ್ಷಣಗಳೆಂದರೆ ಹೃದಯ ಬಡಿತ, ತಲೆನೋವು, ಉಸಿರಾಟದ ತೊಂದರೆ, ಅತಿಸಾರ ಮತ್ತು ಚಡಪಡಿಕೆ.
10. ನಿದ್ರೆಯ ಅಭ್ಯಾಸದಲ್ಲಿನ ಬದಲಾವಣೆಗಳು: ನಿರಂತರವಾಗಿ ನಿದ್ರಾಹೀನತೆ, ಅನಿಯಮಿತ ನಿದ್ರೆ ಮಾನಸಿಕ ಅಸ್ವಸ್ಥತೆಯ ಸಂಕೇತವಾಗಿರಬಹುದು. ಹೆಚ್ಚು ಅಥವಾ ತುಂಬಾ ಕಡಿಮೆ ನಿದ್ರಿಸುವುದು, ನಿದ್ದೆಯನ್ನೇ ಮಾಡದಿರುವುದು, ಆತಂಕ, ಮಾದಕ ದ್ರವ್ಯ ಸೇವನೆ ಇವು ಕೂಡ ಮಾನಸಿಕ ಅನಾರೋಗ್ಯದ ಲಕ್ಷಣಗಳಾಗಿರುತ್ತವೆ.
11. ಮಾದಕ ವ್ಯಸನ: ಮದ್ಯಪಾನ ಮತ್ತು ಮಾದಕ ವ್ಯಸನವು ಮಾನಸಿಕ ಅಸ್ವಸ್ಥತೆಯೊಂದಿಗೆ ಸಂಬಂಧ ಹೊಂದಿರುವ ಸಾಧ್ಯತೆ ಇರುತ್ತದೆ. ಭಾವನಾತ್ಮಕ ಅಥವಾ ಮಾನಸಿಕ ಒತ್ತಡಗಳನ್ನು ನಿಭಾಯಿಸುವ ಪ್ರಯತ್ನದಲ್ಲಿ ಮದ್ಯ ಅಥವಾ ಮಾದಕ ದ್ರವ್ಯಗಳನ್ನು ಸೇವಿಸುವವರು ಕ್ರಮೇಣ ಚಟಕ್ಕೆ ತುತ್ತಾಗುತ್ತಾರೆ. ಮಾದಕ ವ್ಯಸನ ಕೂಡ ಖಿನ್ನತೆಯಂತಹ ಮಾನಸಿಕ ಸಮಸ್ಯೆಗೆ ಕಾರಣವಾಗುತ್ತದೆ.
12. ಹಸಿವು ಮತ್ತು ತೂಕದಲ್ಲಿ ಹಠಾತ್ ಬದಲಾವಣೆ: ಹಸಿವು ಮತ್ತು ತೂಕದಲ್ಲಿನ ಬದಲಾವಣೆಗಳು ಪ್ರಮುಖ ಖಿನ್ನತೆಯ ಸಾಮಾನ್ಯ ರೋಗ ನಿರ್ಣಯದ ಲಕ್ಷಣಗಳಾಗಿವೆ. ಕೆಲವರು ಅಡುಗೆ ಊಟದಲ್ಲಿ ಆಸಕ್ತಿಯನ್ನು ಕಳೆದುಕೊಳ್ಳಬಹುದು. ಕೆಲವರು ತಮ್ಮ ಭಾವನಾತ್ಮಕ ಹಸಿವನ್ನು ಪೂರೈಸಲು ಅತಿಯಾಗಿ ತಿನ್ನುವುದರಲ್ಲಿ ತೊಡಗುತ್ತಾರೆ.
ಮಾನಸಿಕ ಅಸ್ವಸ್ಥತೆಗೆ ಪರಿಹಾರ….
ಚಿಕಿತ್ಸೆ ಪ್ರಕ್ರಿಯೆಯಲ್ಲಿ ಮಾನಸಿಕ ಅಸ್ವಸ್ಥತೆ ಇದೆ ಎಂಬುದನ್ನು ಸ್ವೀಕರಿಸುವುದು ಮೊದಲ ಮತ್ತು ಪ್ರಮುಖ ಹಂತವಾಗಿದೆ. ಮಾನಸಿಕ ಆರೋಗ್ಯ ಸ್ಥಿತಿ ಸುಧಾರಣೆಗೆ ಪ್ರೀತಿಪಾತ್ರರ ಬೆಂಬಲ ಮತ್ತು ವೈದ್ಯಕೀಯ ನೆರವು ಬೇಕಾಗಬಹುದು. ಅದನ್ನು ಚರ್ಚಿಸಲು ಭಯಪಡಬೇಡಿ, ನಾಚಿಕೆಪಡಬೇಡಿ. ಖಿನ್ನತೆ ಮತ್ತು ಆತಂಕದಂತಹ ಪರಿಸ್ಥಿತಿಗಳನ್ನು ಔಷಧಗಳು ಮತ್ತು ಚಿಕಿತ್ಸೆಯೊಂದಿಗೆ ನಿರ್ವಹಿಸಬಹುದು.
ನಿಮ್ಮ ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಮಾತನಾಡಿ, ವೈದ್ಯಕೀಯ ಸಹಾಯವನ್ನು ಪಡೆಯಿರಿ.ಮಾನಸಿಕ ಆರೋಗ್ಯ, ಸಂಬಂಧಿತ ಅಸ್ವಸ್ಥತೆಗಳು, ಅವುಗಳ ಲಕ್ಷಣಗಳು ಮತ್ತು ಅವುಗಳಿಗೆ ಲಭ್ಯವಿರುವ ಚಿಕಿತ್ಸೆಗಳ ಬಗ್ಗೆ ತಿಳಿದುಕೊಳ್ಳಿ. ಸೂಪರ್ ಫಾಸ್ಟ್ ಫಲಿತಾಂಶಗಳನ್ನು ನಿರೀಕ್ಷಿಸಬೇಡಿ. ಮಾನಸಿಕ ಅಸ್ವಸ್ಥತೆಯಿಂದ ಚೇತರಿಸಿಕೊಳ್ಳಲು ಕೆಲವರಿಗೆ ವಾರಗಳು ಮತ್ತು ಇತರರಿಗೆ ವರ್ಷಗಳೇ ಬೇಕಾಗಬಹುದು. ಪ್ರತಿಯೊಂದು ಪ್ರಕರಣವು ತನ್ನದೇ ಆದ ಪ್ರಗತಿ ಮತ್ತು ಹಿನ್ನಡೆಗಳನ್ನು ಹೊಂದಿದೆ. ಕುಟುಂಬದ ಬೆಂಬಲವನ್ನು ತೆಗೆದುಕೊಳ್ಳಿ.