ಹೆತ್ತವರಿಗೆ ಮಕ್ಕಳ ಬಗ್ಗೆ ಅತೀವ ಕಾಳಜಿ ಇರುವುದು ಸಹಜ. ಮಗು ಚೆನ್ನಾಗಿ ತಿಂದು ಆರೋಗ್ಯವಾಗಿರಬೇಕು ಎಂದು ಪೋಷಕರು ಬಯಸ್ತಾರೆ. ಸಮಯಕ್ಕೆ ಸರಿಯಾಗಿ ಸೂಕ್ತವಾದ ಆಹಾರವನ್ನು ಸೇವಿಸಿದ್ರೆ ಮಗುವಿಗೆ ಸರಿಯಾದ ಪೋಷಣೆಯೊಂದಿಗೆ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯಾಗುತ್ತದೆ. ಆದ್ರೆ ಚಿಕ್ಕ ಮಕ್ಕಳಿಗೆ ಊಟ ಮಾಡಿಸುವುದು ಎಂದರೆ ಹರಸಾಹಸವಿದ್ದಂತೆ.
ಬಹುತೇಕ ಎಲ್ಲಾ ಮಕ್ಕಳು ಊಟ ಮಾಡಲು ಹಿಂದೇಟು ಹಾಕುತ್ತಾರೆ. ಊಟ ಬೇಡವೆಂದು ಹಠ ಮಾಡುತ್ತಾರೆ. ಇದರಿಂದ ಪೋಷಕರು ನೊಂದುಕೊಳ್ಳುವುದು ಸಹಜ. ಆದರೆ ಗಾಬರಿಯಾಗುವ ಅಗತ್ಯವಿಲ್ಲ, ಮಕ್ಕಳಿಗೆ ಚೆನ್ನಾಗಿ ಊಟ ಮಾಡಿಸಲು ಸರಳ ತಂತ್ರಗಳಿವೆ. ಊಟ ಮತ್ತು ಉಪಹಾರವನ್ನು ನೀವು ಹೇಗೆ ಪ್ರೆಸೆಂಟ್ ಮಾಡುತ್ತೀರಾ ಅನ್ನೋದು ಬಹುಮುಖ್ಯವಾಗಿರುತ್ತದೆ. ತಟ್ಟೆಯಲ್ಲಿರುವ ಆಹಾರವನ್ನು ಅಲಂಕಾರದೊಂದಿಗೆ ಬಡಿಸಿದರೆ ಮಗುವಿಗೆ ಊಟದ ಬಗ್ಗೆ ಆಸಕ್ತಿ ಹೆಚ್ಚಾಗುತ್ತದೆ. ಹಾಗಾಗಿ ಸಲಾಡ್ ಸೇರಿದಂತೆ ಇತರ ತಿನಿಸುಗಳನ್ನು ಕಲರ್‌ಫುಲ್ ಆಗಿ ಬಡಿಸಿ.
ಸಾಮಾನ್ಯವಾಗಿ ನಾವು ಪ್ರತಿನಿತ್ಯ ಮಕ್ಕಳಿಗೆ ಒಂದೇ ಬಗೆಯ ಆಹಾರ ನೀಡುತ್ತೇವೆ. ಹಾಗೆ ಮಾಡುವುದರಿಂದ ಊಟದ ಬಗ್ಗೆ ಮಗುವಿನ ಆಸಕ್ತಿ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಹಾಗಾಗಿ ಪ್ರತಿದಿನ ಹೊಸ ಬಗೆಯ ತಿನಿಸುಗಳನ್ನು ಮಕ್ಕಳಿಗೆ ಪರಚಯಿಸಿ. ನಿಮ್ಮ ಮಗು ಆರೋಗ್ಯಕರ ಆಹಾರವನ್ನು ತಿನ್ನಬೇಕೆಂದು ನೀವು ಬಯಸಿದರೆ, ಅವರನ್ನೂ ಮಾರುಕಟ್ಟೆಗೆ ಕರೆದೊಯ್ಯುವುದು ಉತ್ತಮ. ಹಣ್ಣುಗಳು ಮತ್ತು ತರಕಾರಿಗಳನ್ನು ಚೆನ್ನಾಗಿ ಅಲಂಕರಿಸಿದ ಅಂಗಡಿಗೆ ಹೋಗಿ. ಇದು ಮಗುವಿನಲ್ಲಿ ಹಣ್ಣು, ತರಕಾರಿಗಳ ಸೇವನೆಯ ಬಗ್ಗೆ ಆಸಕ್ತಿಯನ್ನು ಹೆಚ್ಚಿಸುತ್ತದೆ.
ಅದನ್ನು ತಿನ್ನಲು ಮಗು ಇಷ್ಟಪಡುತ್ತದೆ. ಆದರೆ ಫಾಸ್ಟ್ ಫುಡ್ ಮತ್ತು ಜಂಕ್ ಫುಡ್ ಲಭ್ಯವಿರುವ ಮಾರುಕಟ್ಟೆಯ ಪ್ರದೇಶಗಳಿಗೆ ಮಕ್ಕಳೊಂದಿಗೆ ಹೋಗಬೇಡಿ. ಇತ್ತೀಚಿನ ದಿನಗಳಲ್ಲಿ ಮಕ್ಕಳು ಕೂಡ ಮೊಬೈಲ್ ಮತ್ತು ಟಿವಿಗೆ ಅಡಿಕ್ಟ್ ಆಗಿದ್ದಾರೆ. ಮೊಬೈಲ್, ಟಿವಿ ನೋಡದೆ ಊಟ ಮಾಡುವುದಿಲ್ಲ. ಈ ಚಟವನ್ನು ಹೋಗಲಾಡಿಸುವುದು ಬಹಳ ಮುಖ್ಯ. ಯಾಕಂದ್ರೆ ಮಗುವಿನ ಗಮನ ಊಟಕ್ಕಿಂತ ಹೆಚ್ಚಾಗಿ ಪರದೆಯ ಮೇಲೆ ಕೇಂದ್ರೀಕೃತವಾಗಿರುತ್ತದೆ.