ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಧ್ಯಂತರ ಬಜೆಟ್ ಮಂಡನೆ ಮಾಡಿದ್ದಾರೆ. ಬಜೆಟ್ ನಲ್ಲಿ ಗರ್ಭಕಂಠದ ಕ್ಯಾನ್ಸರ್ ಲಸಿಕೆ ಬಗ್ಗೆ ದೊಡ್ಡ ಘೋಷಣೆ ಮಾಡಿದ್ದಾರೆ. ಗರ್ಭಕಂಠದ ಕ್ಯಾನ್ಸರ್ ತಡೆಗೆ ಸರ್ಕಾರ ದೇಶದಾದ್ಯಂತ ಉಚಿತ ಲಸಿಕೆ ಅಭಿಯಾನ ಶುರು ಮಾಡಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಈ ಲಸಿಕೆಯನ್ನು 9 ರಿಂದ 14 ವರ್ಷದ ಬಾಲಕಿಯರಿಗೆ ಹೆಚ್ ಪಿ ವಿ ಲಸಿಕೆ ನೀಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಗರ್ಭಕಂಠದ ಕ್ಯಾನ್ಸರ್ ದೇಶದಲ್ಲಿ ಮಹಿಳೆಯರನ್ನು ಕಾಡುತ್ತಿರುವ ಎರಡನೇ ಅತಿ ಸಾಮಾನ್ಯ ಕ್ಯಾನ್ಸರ್ ಆಗಿದೆ. ಪ್ರತಿ ವರ್ಷ ಸಾವಿರಾರು ಮಂದಿ ಈ ಕ್ಯಾನ್ಸರ್ ನಿಂದ ಸಾವನ್ನಪ್ಪುತ್ತಿದ್ದಾರೆ. ಗರ್ಭಕಂಠದ ಕ್ಯಾನ್ಸರ್ ತಡೆಗೆ ಲಸಿಕೆ ಲಭ್ಯವಿದೆ. ಕ್ಯಾನ್ಸರ್ ಪತ್ತೆಯಾದ್ಮೇಲೆ ಚಿಕಿತ್ಸೆ ಪಡೆಯುವ ಬದಲು ಕ್ಯಾನ್ಸರ್ ಬರದಂತೆ ಚಿಕಿತ್ಸೆ ಪಡೆಯೋದು ಉತ್ತಮ ಮಾರ್ಗ. ಲಸಿಕೆ ಮೂಲಕ ಈ ಕ್ಯಾನ್ಸರ್ ಅಪಾಯವನ್ನು ಶೇಕಡಾ 98 ರಷ್ಟು ಕಡಿಮೆ ಮಾಡಬಹುದು.
9 ರಿಂದ 14 ವರ್ಷದ ಹುಡುಗಿಯರಿಗೆ ಲಸಿಕೆಯನ್ನು ನೀಡೋದ್ರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಹ್ಯೂಮನ್ ಪ್ಯಾಪಿಲೋಮಾ ವೈರಸ್ (HPV) ಅಪಾಯವನ್ನು ಕಡಿಮೆ ಮಾಡುತ್ತದೆ. 14 ವರ್ಷದ ಹೆಣ್ಣುಮಕ್ಕಳಿಗೆ ಈ ಲಸಿಕೆಯ ಒಂದು ಡೋಸ್ ನೀಡಿದ್ರೆ ಸಾಕು. 15 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಹುಡುಗಿಯರು 2 ರಿಂದ 3 ಡೋಸ್ ಲಸಿಕೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. 26 ವರ್ಷ ವಯಸ್ಸಿನವರೆಗೆ ಈ ಲಸಿಕೆ ಹೆಚ್ಚು ಪರಿಣಾಮ ಬೀರುತ್ತದೆ. ಇದಕ್ಕಿಂತ ಹೆಚ್ಚು ವಯಸ್ಸಿನ ಮಹಿಳೆಯರಲ್ಲಿ ಕಡಿಮೆ ಪರಿಣಾಮ ಬೀರುತ್ತದೆ. ಹ್ಯೂಮನ್ ಪ್ಯಾಪಿಲೋಮಾ ವೈರಸ್ ಗಂಟಲಿನ ಕ್ಯಾನ್ಸರ್ ವಿರುದ್ಧವೂ ರಕ್ಷಣೆ ನೀಡುತ್ತದೆ ಎಂದು ತಜ್ಞರು ಹೇಳಿದ್ದಾರೆ. ಈ ಲಸಿಕೆಯ ಒಂದು ಡೋಸ್ ಬೆಲೆ 2000 ರೂಪಾಯಿಯಿಂದ 3500 ರೂಪಾಯಿ ಇದೆ.
ಹೆಚ್ ಐವಿ ಮಹಿಳೆಯರು, ಧೂಮಪಾನಿಗಳು ಜನನಾಂಗದ ನೈರ್ಮಲ್ಯ ಕೊರತೆ ಹಾಗೂ ಚಿಕ್ಕ ವಯಸ್ಸಿನಲ್ಲೇ ಮಕ್ಕಳನ್ನು ಪಡೆಯುವ ಮಹಿಳೆಯರಿಗೆ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ.
ಶಾರೀರಿಕ ಸಂಬಂಧದ ನಂತ್ರ ರಕ್ತಸ್ರಾವ, ಪಿರಿಯಡ್ಸ್ ನಂತ್ರ ಅನಿಯಮಿತ ಮುಟ್ಟು, ದುರ್ವಾಸನೆಯ ಸ್ರಾವ ಪಿರಿಯಡ್ಸ್ ನಂತ್ರವೂ ಬ್ಲೀಡಿಂಗ್ ಗರ್ಭಕಂಠ ಕ್ಯಾನ್ಸರ್ ನ ಲಕ್ಷಣವಾಗಿದೆ. ಇದು ಪತ್ತೆಯಾಗ್ತಿದ್ದಂತೆ ತಕ್ಷಣ ವೈದ್ಯರನ್ನು ಭೇಟಿಯಾಗ್ಬೇಕು ಎಂದು ತಜ್ಞರು ಹೇಳಿದ್ದಾರೆ.