ಬೆಂಗಳೂರು: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೀಡಿದ ಹೇಳಿಕೆ ಖಂಡಿಸಿ ಇಂದಿನಿಂದ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕೇಂದ್ರ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆ ದುರುದ್ದೇಶ ಪೂರ್ವಕವಾಗಿದೆ. ಲೆಕ್ಕಾಚಾರ ಹಾಕಿಕೊಂಡೆ ಉದ್ದೇಶಪೂರ್ವಕವಾಗಿ ಅಂಬೇಡ್ಕರ್ ಬಗ್ಗೆ ಅಮಿತ್ ಶಾ ಹೇಳಿಕೆ ನೀಡಿದ್ದು, ಇದನ್ನು ಖಂಡಿಸಿ ಸೋಮವಾರದಿಂದ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಸಾವರ್ಕರ್ ಮತ್ತು ಗೋಳ್ವಾಲ್ಕರ್ ಅವರು ಕೂಡ ಅಂಬೇಡ್ಕರ್ ಮತ್ತು ಅವರು ರಚಿಸಿದ ಸಂವಿಧಾನದ ಬಗ್ಗೆ ಇದೇ ರೀತಿಯ ಕೀಳು ಮಟ್ಟದ ಹೇಳಿಕೆ ನೀಡಿದ್ದರು. ಅವರ ಹಿಂಬಾಲಕರಾದ ಅಮಿತ್ ಶಾ ಇದೀಗ ಅಂಬೇಡ್ಕರ್ ಹೆಸರು ಹೇಳುವುದನ್ನು ಫ್ಯಾಷನ್ ಎಂದು ಕರೆಯುವ ಮೂಲಕ ಅಂಬೇಡ್ಕರ್ ಕುರಿತು ಆರ್.ಎಸ್.ಎಸ್.ನ ಆಂತರ್ಯದಲ್ಲಿರುವ ಅಸಹನೆಯನ್ನು ಹೊರ ಹಾಕಿದ್ದಾರೆ. ಬಿಜೆಪಿ, ಸಂಘ ಪರಿವಾರದವರು ವ್ಯಸನಿಗಳು. ವಿಕೃತ ಮನಸ್ಸಿನವರು ಎಂದು ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ಅಂಬೇಡ್ಕರ್ ಕುರಿತಂತೆ ಆರ್.ಎಸ್.ಎಸ್. ಅಭಿಪ್ರಾಯವನ್ನೇ ಅಮಿತ್ ಶಾ ತಮ್ಮ ಹೇಳಿಕೆಯಲ್ಲಿ ಪ್ರತಿಪಾದಿಸಿದ್ದು, ಪ್ರಜಾಪ್ರಭುತ್ವದ ದೇವಾಲಯ ಸಂಸತ್ ನಲ್ಲಿ ನಿಂತು ಇಂತಹ ಕೀಳು ಮಟ್ಟದ ಹೇಳಿಕೆ ನೀಡಿರುವುದು ಖಂಡನೀಯ. ಕೂಡಲೇ ಅವರು ದೇಶದ ಜನರ ಕ್ಷಮೆ ಯಾಚಿಸಬೇಕು ಎಂದು ಹರಿಪ್ರಸಾದ್ ಒತ್ತಾಯಿಸಿದ್ದಾರೆ.