
ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ತಾವು ಜೀವನದಲ್ಲಿ ಒಂದೇ ಒಂದು ತಪ್ಪು ಮಾಡಿದ್ದಾಗಿ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಉತ್ತಮ ರಸ್ತೆಯಾಗುತ್ತದೆ ಎಂಬ ಮಹತ್ವಾಕಾಂಕ್ಷೆಯಿಂದ ನೈಸ್ ರಸ್ತೆ ಮಾಡಿ ತಪ್ಪು ಮಾಡಿದೆ. ಆದರೆ ಮಹಾನುಭಾವರು ದೊಡ್ಡ ಪೆಟ್ಟು ಕೊಟ್ಟರು ಎಂದು ಹೇಳಿದರು.
ನೈಸ್ ಯೋಜನೆಯಿಂದ ಬಡವರಿಗೆ ಅನ್ಯಾಯವಾಗಿದೆ. ನಮ್ಮ ಪಕ್ಷ ಇದರ ವಿರುದ್ಧ ವಿಧಾನಸಭೆಯಲ್ಲಿ ಹಾಗೂ ಹೊರಗೆ ಧ್ವನಿ ಎತ್ತಿದೆ. ಆದರೆ ಮಾಜಿ ಸಚಿವ ಜಯಚಂದ್ರ ನೇತೃತ್ವದಲ್ಲಿ ಸದನ ಸಮಿತಿ ನೇಮಕ ಮಾಡಿ ವರದಿ ನೀಡಿದೆ. ಮೈಸೂರಿಗೆ ಒಂದು ಗಂಟೆಯಲ್ಲಿ ತಲುಪಬಹುದು ಎಂಬ ಕಾರಣಕ್ಕೆ ಯೋಜನೆಗೆ ಅನುಮತಿ ಕೊಟ್ಟಿದೆ. ರಾಜ್ಯ ಸರ್ಕಾರ ತಕ್ಷಣ ನೈಸ್ ಯೋಜನೆಯನ್ನು ಸರ್ಕಾರದ ವಶಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.
ಅಕ್ಟೋಬರ್ 19ರಂದು ನಾನು ನೈಸ್ ಭೂಮಿ ಸರ್ಕಾರದ ವಶಕ್ಕೆ ಪಡೆಯಬೇಕು ಎಂದು ಸಿಎಂಗೆ ಪತ್ರ ಬರೆದಿದ್ದೆ. ಆದರೆ ಈ ಬಗ್ಗೆ ಸಿಎಂ ಕ್ರಮಕ್ಕೆ ಮುಂದಾಗಿಲ್ಲ. ಒಟ್ಟು 13,404 ಎಕರೆ ಭೂಮಿಯನ್ನು ನೈಸ್ ವಶಕ್ಕೆ ಪಡೆದಿದೆ. ಈ ಭೂಮಿಯ ಬೆಲೆ 707,77,766,040 ಕೋಟಿ ಎಂದು ಸದನ ಸಮಿತಿ ವರದಿ ನೀಡಿದೆ. ಈಗ ಈ ಭೂಮಿ ಬೆಲೆ ಇನ್ನೂ ಹೆಚ್ಚಾಗುತ್ತದೆ. ಬಡವರ ಪರ ಮಾತನಾಡುವ ಸಿಎಂ ನೈಸ್ ಯೋಜನೆ ವಿಚಾರದಲ್ಲಿ ಬಡವರಿಗೆ ಅನ್ಯಾಯವಾಗುತ್ತಿದ್ದರೂ ಯಾಕೆ ಮಾತನಾಡುತ್ತಿಲ್ಲ? ಎಂದು ಪ್ರಶ್ನಿಸಿದರು.