ಗುರುವಾಯೂರು ದೇವಸ್ಥಾನದ ಮುಖ್ಯ ಅರ್ಚಕರಾಗಿ 57 ವರ್ಷ ವಯಸ್ಸಿನ ಡಾ ತೊಟ್ಟಂ ಶಿವಕರನ್ ನಂಬೂದರಿ ಆಯ್ಕೆಯಾಗಿದ್ದಾರೆ. ಕೇರಳ ಶೈಲಿಯ ಜಮಿನೀಯ ಸಾಮವೇದ ಪಠಣದ ಉಳಿದಿರುವ ಎರಡೇ ದನಿಗಳಲ್ಲಿ ಒಬ್ಬರಾಗಿದ್ದಾರೆ ಶಿವಕರನ್. ಶತಮಾನಗಳಷ್ಟು ಹಳೆಯದಾದ ಸಾಮವೇದೀಯ ಪಠಣವು 1970ರ ದಶಕದಲ್ಲಿ ಅಳಿವಿನ ಅಂಚಿಗೆ ಸಾಗಿತ್ತು.
ಕೇರಳದ ಕೇಂದ್ರ ಭಾಗದಲ್ಲಿರುವ ಈ ಜಿಲ್ಲೆಯಲ್ಲಿ ಗುರುಕುಲ ಸ್ಥಾಪನೆ ಮೂಲಕ ಈ ಮಂತ್ರ ಪಠಣವನ್ನು ಸಂರಕ್ಷಿಸಲು ಮುಂದಾಗಿದ್ದರು ಶಿವಕರನ್. ರಿಗ್ವೇದ ಕಾಲದ 1,700ಕ್ಕೂ ಹೆಚ್ಚಿನ ಭಜನೆಗಳನ್ನು ಒಳಗೊಂಡಿರುವ ಜಮಿನಿಯ ಸಾಮವೇದವನ್ನು ಪೂರ್ಣ ಜ್ಞಾನದೊಂದಿಗೆ ಪಠಿಸುವ ಇಬ್ಬರೇ ವ್ಯಕ್ತಿಗಳು ಇರುವ ಕಾರಣ ಸದ್ಯದ ಮಟ್ಟಿಗೆ ಈ ವಿಶಿಷ್ಟ ಶೈಲಿಯ ಪಠಣವು ಅಳಿವಿನಂಚಿನಲ್ಲೇ ಇದೆ.
ವೃತ್ತಿಯಲ್ಲಿ ಆಯುರ್ವೇದ ವೈದ್ಯರೂ ಆಗಿರುವ ಡಾ ಶಿವಕರನ್, ಶ್ರೀ ಕೃಷ್ಣನ ಅವತಾರಿಯಾದ ಗುರುವಾಯೂರಪ್ಪನ ದೇಗುಲದ ಮುಖ್ಯ ಅರ್ಚಕರಾಗಿ ಆಯ್ಕೆಯಾಗಿದ್ದಾರೆ.
ದಿಗ್ಗಜ ಕಮ್ಯೂನಿಸ್ಟ್ ನಾಯಕ ಹಾಗೂ ಕೇರಳದ ಮಾಜಿ ಮುಖ್ಯಮಂತ್ರಿ ಇಎಂಎಸ್ ನಂಬೂದರಿಪಾಡ್ರ ದೂರದ ಸಂಬಂಧಿಯೂ ಆಗಿರುವ ಶಿವಕರನ್, ಆರು ತಿಂಗಳ ಕಾಲ ಗುರುವಾಯೂರು ದೇಗುಲದ ’ಮೇಲ್ಶಾಂತಿ’ಯಾಗಿ ಕೆಲಸ ಮಾಡಲಿದ್ದು, ಈ ಅವಧಿಯಲ್ಲಿ ಅವರು ಅಲ್ಲೇ ಇರಬೇಕಾಗುತ್ತದೆ. ಈ ಆರು ತಿಂಗಳ ಅವಧಿಯ ಬಳಿಕ ತಮ್ಮ ಎಂದಿನ ಕೈಂಕರ್ಯವಾದ ವೇದ ಮಂತ್ರ ಪಠಣದ ಬೋಧನೆಗೆ ಮರಳುವುದಾಗಿ ತಿಳಿಸಿದ್ದಾರೆ ಶಿವಕರನ್.
ಇದಕ್ಕೂ ಮುನ್ನ 34 ವರ್ಷ ವಯಸ್ಸಿನ ಡಾ ಕಿರಣ್ ಆನಂದ್ ಕಕ್ಕಡ್ ಅವರು ಗುರುವಾಯೂರು ದೇಗುಲದ ’ಮೇಲ್ಶಾಂತಿ’ಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಡಾ ಆನಂದ್ ಆಯುರ್ವೇದ ವೈದ್ಯರೂ ಆಗಿದ್ದು, ಯೂಟ್ಯೂಬರ್, ಗಾಯಕ ಹಾಗೂ ವ್ಲಾಗರ್ ಸಹ ಆಗಿದ್ದಾರೆ. ಮಾಸ್ಕೋದ ರಷ್ಯನ್ ಆಯುರ್ವೇದ ಕ್ಲಿನಿಕ್ನಲ್ಲಿ ವೈದ್ಯರಾಗಿ ಆರು ವರ್ಷ ಸೇವೆ ಸಲ್ಲಿಸಿದ್ದಾರೆ ಡಾ ಕಿರಣ್.