ಗುರುಗ್ರಾಮ್ನ ಶಸ್ತ್ರಚಿಕಿತ್ಸಕ ಡಾ. ತುಷಾರ್ ಮೆಹ್ತಾ, ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ದೆಹಲಿ ವಿಮಾನ ನಿಲ್ದಾಣದಲ್ಲಿ ತಾವು ಧರಿಸಿದ್ದ ಆಪಲ್ ವಾಚ್ ಕಳವು ಮಾಡಿರುವುದಾಗಿ ಹೇಳಿದ್ದು, ಆದರೆ, ದೆಹಲಿ ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಕೇಂದ್ರ ಕೈಗಾರಿಕಾ ಸುರಕ್ಷಾ ಪಡೆ (ಸಿಐಎಸ್ಎಫ್) ಅಧಿಕಾರಿಗಳು ಆಪಲ್ ವಾಚ್ ಕಳವು ಆರೋಪ ಹುಸಿ ಎಂದು ಬಹಿರಂಗಪಡಿಸಿದೆ. ಇದಾದ ನಂತರ ಡಾ. ತುಷಾರ್ ಮೆಹ್ತಾ ʼಎಕ್ಸ್ʼ ನಲ್ಲಿನ ಪ್ರೊಫೈಲ್ ಅನ್ನು ನಿಷ್ಕ್ರಿಯಗೊಳಿಸಿದ್ದಾರೆ.
ಪ್ರಕರಣದ ವಿವರ: ಕೆಲ ದಿನಗಳ ಹಿಂದೆ ಡಾ. ಮೆಹ್ತಾ ತಮ್ಮ ʼಎಕ್ಸ್ʼ ಹ್ಯಾಂಡಲ್ನಿಂದ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಐಜಿಐ) ಟರ್ಮಿನಲ್ 3 ರಲ್ಲಿ ಭದ್ರತಾ ತಪಾಸಣೆ ಮಾಡಿಸಿಕೊಳ್ಳುವಾಗ ತಮ್ಮ ಆಪಲ್ ವಾಚ್ ಕಳವು ಆಗಿದೆ ಎಂದು ಪೋಸ್ಟ್ ಮಾಡಿದ್ದರು. ತಮ್ಮ ಪೋಸ್ಟ್ನಲ್ಲಿ, ಮೆಹ್ತಾ ಆಪಲ್ ವಾಚ್ ಅನ್ನು ತೆಗೆದು ಸ್ಕ್ಯಾನಿಂಗ್ ಯಂತ್ರದ ಮೂಲಕ ಹಾದುಹೋಗುವ ಟ್ರೇನಲ್ಲಿ ಇಟ್ಟ ನಂತರ ಅದು ಕಾಣೆಯಾಗಿತ್ತು ಎಂದು ಹೇಳಿದ್ದರು.
ಮೆಹ್ತಾ ಈ ಕುರಿತು ಸಿಐಎಸ್ಎಫ್ ವ್ಯಕ್ತಿಯೊಂದಿಗೆ ಮಾತನಾಡಿದ್ದು, ನಂತರ ಸಂಶಯಾಸ್ಪದವಾಗಿ ನಡೆದುಕೊಂಡು ಹೋಗುತ್ತಿರುವ ವ್ಯಕ್ತಿಯನ್ನು ನೋಡಿದೆ ಎಂದು ತಮ್ಮ ಪೋಸ್ಟ್ ನಲ್ಲಿ ವಿವರಿಸಿದ್ದ ಮೆಹ್ತಾ, ಆ ವ್ಯಕ್ತಿಯನ್ನು ಎದುರಿಸಿ ಅವನ ಜೇಬಿನಿಂದ ಗಡಿಯಾರವನ್ನು ಬಲವಂತವಾಗಿ ತೆಗೆದುಕೊಂಡಿದ್ದಾಗಿ ಹೇಳಿದ್ದರು. ಆ ಬಳಿಕ ವಿಮಾನ ನಿಲ್ದಾಣದ ಹೀಲಿಯೋಸ್ ಶೋರೂಮ್ನ ಒಬ್ಬ ವ್ಯಕ್ತಿ ಆ ವ್ಯಕ್ತಿಯ ಪರವಾಗಿ ತಮ್ಮ ಜೊತೆ ಜಗಳವಾಡಿದ್ದರು ಎಂದು ಮೆಹ್ತಾ ತಿಳಿಸಿದ್ದರು.
ಡಾ. ಮೆಹ್ತಾ ಅವರ ಹೇಳಿಕೆಗೆ, ಸಿಐಎಸ್ಎಫ್ ಮತ್ತು ದೆಹಲಿ ವಿಮಾನ ನಿಲ್ದಾಣವು ತಮ್ಮ ಅಧಿಕೃತ ಹ್ಯಾಂಡಲ್ಗಳಿಂದ ಪ್ರತಿಕ್ರಿಯಿಸಿದೆ. ಸಿಐಎಸ್ಎಫ್ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಮೆಹ್ತಾ ಭದ್ರತಾ ತಪಾಸಣೆಯ ನಂತರ ತನ್ನ ವಾಚ್ ಧರಿಸಿಕೊಂಡು ಹೋಗುತ್ತಿರುವುದು ಮತ್ತು ನಂತರ ಯಾವುದೇ ಸಿಐಎಸ್ಎಫ್ ಸಿಬ್ಬಂದಿಯೊಂದಿಗೆ ಸಂವಹನ ನಡೆಸದೆ ಬೋರ್ಡಿಂಗ್ ಗೇಟ್ಗೆ ತೆರಳಿದ್ದು ಮತ್ತು ಸುಗಮವಾಗಿ ವಿಮಾನ ಹತ್ತಿದ್ದು ಕಂಡುಬಂದಿದೆ ಎಂದು ಹೇಳಿದೆ. ದೆಹಲಿ ವಿಮಾನ ನಿಲ್ದಾಣವೂ ಸಹ ಸಿಐಎಸ್ಎಫ್ ಹೇಳಿಕೆಯನ್ನು ದೃಢಪಡಿಸಿದೆ.
ವಿಮಾನ ನಿಲ್ದಾಣವು ‘ಯಾವುದೇ ಸಂಶಯಾಸ್ಪದ ಚಟುವಟಿಕೆ ಗಮನಿಸಲಾಗಿಲ್ಲ’ ಮತ್ತು ‘ಆರೋಪಗಳು ಸುಳ್ಳು’ ಎಂದು ಹೇಳಿದೆ. ಡಾ. ಮೆಹ್ತಾ ತಮ್ಮ ಆರೋಪಗಳನ್ನು ಅಧಿಕಾರಿಗಳು ಹುಸಿಯೆಂದು ಹೇಳಿದ ಕಾರಣ ಎಕ್ಸ್ನಲ್ಲಿ ತಮ್ಮ ಖಾತೆಯನ್ನು ಅಳಿಸಿದ್ದಾರೆಯೇ ಎಂಬುದು ಈಗ ತಿಳಿದಿಲ್ಲ.