ಪಾಲನ್‌ಪುರ: ಇಲ್ಲಿನ ಠಾಕೋರ್ ಸಮುದಾಯವು ಸಮಾಜದ ಹದಿಹರೆಯದ ಹುಡುಗಿಯರು ಮೊಬೈಲ್ ಫೋನ್ ಬಳಸುವುದನ್ನು ನಿಷೇಧಿಸಿದೆ.
ಸಮುದಾಯ, ಸಮುದಾಯ ಸಂಪ್ರದಾಯಗಳಲ್ಲಿ ಸುಧಾರಣೆಗಳನ್ನು ತರಲು ಸರ್ವಾನುಮತದಿಂದ ನಿರ್ಣಯಗಳನ್ನು ಅಂಗೀಕರಿಸಿದ್ದು, ಹುಡುಗಿಯರು ಮೊಬೈಲ್ ಫೋನ್ ಬಳಸುವುದನ್ನು ನಿಲ್ಲಿಸಲು ನಿರ್ಧರಿಸಲಾಗಿದೆ.
ಹದಿಹರೆಯದ ಹುಡುಗಿಯರಲ್ಲಿ ಸೆಲ್ ಫೋನ್ ಬಳಸುವುದರಿಂದ, ಬಹಳಷ್ಟು ತಪ್ಪುಗಳು ನಡೆಯುತ್ತಿವೆ ಎಂದು ಪರಿಗಣಿಸಿ ಸೆಲ್ ಫೋನ್ ಬಳಸುವುದನ್ನು ನಿಷೇಧಿಸಲಾಗಿದೆ.
ಕಾಂಗ್ರೆಸ್ ಶಾಸಕ ವಾವ್ ಗೆನಿಬೆನ್ ಠಾಕೂರ್ ಅವರ ಸಮ್ಮುಖದಲ್ಲಿ ನಿರ್ಣಯವನ್ನು ಅಂಗೀಕರಿಸಲಾಯಿತು. ಬನಸ್ಕಾಂತ ಜಿಲ್ಲೆಯ ಭಭಾರ್ ತಾಲೂಕಿನ ಲುನ್ಸೆಲಾ ಗ್ರಾಮದಲ್ಲಿ ಭಾನುವಾರ ಈ ಘಟನೆ ನಡೆದಿದೆ.
ನಿಶ್ಚಿತಾರ್ಥ ಮತ್ತು ಮದುವೆ ಸಮಾರಂಭಗಳಲ್ಲಿ ಅತಿಥಿಗಳ ಸಂಖ್ಯೆಯನ್ನು ಮಿತಿಗೊಳಿಸುವುದು. ನಿರ್ಣಯದ ಪ್ರಕಾರ, ನಿಶ್ಚಿತಾರ್ಥ ಅಥವಾ ಮದುವೆ ಸಮಾರಂಭದಲ್ಲಿ ಕೇವಲ 11 ಜನರು ಭಾಗವಹಿಸಬೇಕು, ಠಾಕೂರ್ ಸಮುದಾಯವು ಹೆಚ್ಚಿನ ಸಂಖ್ಯೆ ಹೊಂದಿರುವ ಪ್ರತಿ ಹಳ್ಳಿಯಲ್ಲಿ ಸಾಮೂಹಿಕ ವಿವಾಹಗಳನ್ನು ಏರ್ಪಡಿಸಬೇಕು. ಮದುವೆ ಮತ್ತು ನಿಶ್ಚಿತಾರ್ಥದ ವೆಚ್ಚವನ್ನು ನಿಯಂತ್ರಿಸಬೇಕು. ಮದುವೆಗೆ ಯಾವುದೇ ಡಿಜೆ ಸೌಂಡ್ ಸಿಸ್ಟಂ ಅಳವಡಿಸಬಾರದು.
ಸಮುದಾಯವು ನಿಶ್ಚಿತಾರ್ಥದ ನಂತರ ಸಂಬಂಧಗಳನ್ನು ಮುರಿಯುವ ಕುಟುಂಬಗಳಿಗೆ ದಂಡ ವಿಧಿಸಬೇಕು, ದಂಡವಾಗಿ ಸಂಗ್ರಹಿಸಿದ ಹಣವನ್ನು ಶಿಕ್ಷಣ ಮತ್ತು ಸಮುದಾಯ ಸೌಲಭ್ಯಗಳನ್ನು ನಿರ್ಮಿಸಲು ಬಳಸಬೇಕು. ಹೆಣ್ಣು ಮಕ್ಕಳು ಉನ್ನತ ವಿದ್ಯಾಭ್ಯಾಸಕ್ಕಾಗಿ ಊರಿಗೆ ಹೋಗುತ್ತಿದ್ದರೆ ಅವರಿಗೆ ಗ್ರಾಮದ ಸಮುದಾಯದವರು ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.