ಬೆಂಗಳೂರು: ಗೃಹ ಜ್ಯೋತಿ ಯೋಜನೆಯಡಿ ಜುಲೈ ತಿಂಗಳ ಉಚಿತ ವಿದ್ಯುತ್ ಸೌಲಭ್ಯ ಪಡೆಯಲು ನೀಡಿದ್ದ ಗಡುವು ಜುಲೈ 27ರಂದು ಮುಕ್ತಾಯವಾಗಿದೆ. ಜುಲೈ 28 ರಿಂದ ನೋಂದಣಿ ಮಾಡಿದವರಿಗೆ ಆಗಸ್ಟ್ ನಲ್ಲಿ ಬರುವ ಜುಲೈ ಬಳಕೆಯ ವಿದ್ಯುತ್ ಬಿಲ್ ಉಚಿತವಾಗಿರುವುದಿಲ್ಲ. ಆಗಸ್ಟ್ ನಿಂದ ಉಚಿತ ವಿದ್ಯುತ್ ಸೌಲಭ್ಯ ಸಿಗಲಿದೆ.
ವಾರದ ಹಿಂದೆ ಅರ್ಜಿ ಸಲ್ಲಿಸಿದ ಲಕ್ಷಾಂತರ ಗ್ರಾಹಕರ ಅರ್ಜಿಗಳಿಗೆ ಇದುವರೆಗೂ ಅನುಮೋದನೆ ದೊರೆತಿಲ್ಲ. ಬಹುತೇಕ ಅರ್ಜಿಗಳು ಪ್ರಕ್ರಿಯೆ ಹಂತದಲ್ಲಿದ್ದು, ಎಸ್ಕಾಂಗಳು ಅಂಗೀಕರಿಸದಿದ್ದರೆ ಮೇ, ಜೂನ್ ತಿಂಗಳ ರೀತಿಯಲ್ಲಿ ಜುಲೈ ತಿಂಗಳ ವಿದ್ಯುತ್ ಬಿಲ್ ಪಾವತಿಸಬೇಕಾಗುತ್ತದೆ ಎಂದು ಹೇಳಲಾಗಿದೆ.
ಅರ್ಜಿ ನೋಂದಣಿಗಾಗಿ ಯಾವುದೇ ಅಂತಿಮ ಗಡುವು ಇರುವುದಿಲ್ಲ. ಜುಲೈ ತಿಂಗಳ ವಿದ್ಯುತ್ ಬಳಕೆಗೆ ಶುಲ್ಕ ಪಾವತಿಸದಿರಲು ಜುಲೈ 27ರ ಒಳಗೆ ಅರ್ಜಿ ಸಲ್ಲಿಸಬೇಕಿತ್ತು. ಈಗಾಗಲೇ ನೋಂದಣಿ ಮಾಡಿಕೊಂಡವರಿಗೆ ಅವರ ಹಿಂದಿನ 12 ತಿಂಗಳ ಸರಾಸರಿ ಆಧರಿಸಿ ಶೇಕಡ 10ರಷ್ಟು ಹೆಚ್ಚುವರಿ ವಿದ್ಯುತ್ ಉಚಿತವಾಗಿ ಬಳಕೆ ಮಾಡಲು ಅವಕಾಶ ಇದೆ. ಅರ್ಜಿ ಸಲ್ಲಿಸಿದವರು ಜುಲೈ ತಿಂಗಳ ವಿದ್ಯುತ್ ಬಳಕೆಗೆ ಆಗಸ್ಟ್ ನಲ್ಲಿ ಬಿಲ್ ಕಟ್ಟಬೇಕಿಲ್ಲ. ಜುಲೈ 27ರೊಳಗೆ ಅರ್ಜಿ ಸಲ್ಲಿಸದವರು ಜುಲೈ ಬಳಕೆಯ ವಿದ್ಯುತ್ ನ ಪೂರ್ಣ ಶುಲ್ಕ ಪಾವತಿಸಬೇಕು. ಜುಲೈ 28 ರಿಂದ ಆಗಸ್ಟ್ 27ರ ನಡುವೆ ಅರ್ಜಿ ಸಲ್ಲಿಸಿದವರಿಗೆ ಸೆಪ್ಟಂಬರ್ ನಲ್ಲಿ ನೀಡುವ ಆಗಸ್ಟ್ ತಿಂಗಳ ವಿದ್ಯುತ್ ಬಿಲ್ ಉಚಿತವಾಗಿರುತ್ತದೆ.
ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವವರು ಅರ್ಜಿಯ ಸ್ಥಿತಿಗತಿಯನ್ನು ಪರಿಶೀಲಿಸಲು https://sevasindhu.karnataka.gov.in ವೆಬ್ಸೈಟ್ ನಲ್ಲಿ ಟ್ರ್ಯಾಕ್ಸ್ ಸ್ಟೇಟಸ್ ಎಂಬ ಆಯ್ಕೆ ಕ್ಲಿಕ್ಕಿಸಿ ಅರ್ಜಿಯ ಸ್ಥಿತಿಗತಿ ಗಮನಿಸಬಹುದಾಗಿದೆ ಎಂದು ಹೇಳಲಾಗಿದೆ.