ಕಲಬುರಗಿ : ರಾಜ್ಯದಲ್ಲಿ ಮುಂಗಾರು ಮಳೆ ಅಭಾವ ಹಿನ್ನೆಲೆಯಲ್ಲಿ ಮೋಡ ಬಿತ್ತನೆ ಮಾಡುವ ಚಿಂತನೆ ಸರ್ಕಾರದ ಮುಂದಿಲ್ಲ ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಸ್ತುತ ಮೋಡ ಬಿತ್ತನೆ ಸಹ ಸರ್ಕಾರದ ಮುಂದಿಲ್ಲ. ಮಳೆ 10 ದಿನ ತಡವಾಗಿದ್ದು, ಮುಂದಿನ ಮೂರ್ನಾಲ್ಕು ದಿನದಲ್ಲಿ ಮಳೆ ಬರುವ ಸಾಧ್ಯತೆವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದರಿಂದ ಕಾದು ನೋಡುತ್ತಿದ್ದೇವೆ ಎಂದರು.
ಕಂದಾಯ ಸಚಿವ ಕೃಷ್ಣ ಭೈರೆಗೌಡ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪ ಸಮಿತಿ ರಚಿಸಿದ್ದು, ಬರುವ ಜುಲೈ 15ಕ್ಕೆ ಸಭೆ ನಡೆಯಲಿದೆ. ಅಲ್ಲಿ ಬರಗಾಲ ಘೋಷಣೆ ಮಾಡಬೇಕೆ ಅಥವಾ ಇಲ್ಲ ಎಂಬುದರ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಪ್ರಸ್ತುತ ಕಲಬುರಗಿ, ಬೀದರ, ಯಾದಗಿರಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಈ ಜಿಲ್ಲೆಗಳಿಗೆ ತಲಾ 1 ಕೋಟಿ ರೂ. ಅನುದಾನ ನೀಡಲಾಗಿದೆ. ಇದಲ್ಲದೆ ಹೆಚ್ಚುವರಿ ಅನುದಾನ ಬೇಕಿದಲ್ಲಿ ಸರ್ಕಾರ ನೀಡಲಿದೆ ಎಂದರು.