ಶಿವಮೊಗ್ಗ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ನಿರ್ಣಯದಂತೆ ಶಿವಮೊಗ್ಗ ಜಿಲ್ಲಾ ನೌಕರರ ಸಂಘದ ವತಿಯಿಂದ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶಿವಮೊಗ್ಗ ನಗರ ಕ್ಷೇತ್ರ ಶಾಸಕ ಎಸ್.ಎನ್. ಚನ್ನಬಸಪ್ಪ ಅವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಏಳನೇ ವೇತನದ ಆಯೋಗದ ವರದಿಯನ್ನು ಶೀಘ್ರವಾಗಿ ಪಡೆದು ಅನುಷ್ಠಾನಗೊಳಿಸಬೇಕು. ಹೊಸ ಪಿಂಚಣಿ ವ್ಯವಸ್ಥೆಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸಬೇಕು. ಪ್ರಸ್ತುತ ಹೊಸ ಪಿಂಚಣಿ ವ್ಯವಸ್ಥೆಗೆ ಕಠಾವಣೆಯಾಗುತ್ತಿರುವ ನೌಕರರ ವಂತಿಕೆಯನ್ನು ಸ್ಥಗಿತಗೊಳಿಸುವಂತೆ ಕೋರಿ ನೌಕರರ ಪರವಾಗಿ ಸರ್ಕಾರವನ್ನು ಒತ್ತಾಯಿಸುವಂತೆ ಮನವಿ ನೀಡಲಾಯಿತು. ಅಲ್ಲದೆ ನಗದು ರಹಿತ ಚಿಕಿತ್ಸೆ ನೀಡುವ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸುವಂತೆಯೂ ಮನವಿ ಮಾಡಲಾಯಿತು.
ಮನವಿ ಸ್ವೀಕರಿಸಿದ ಶಾಸಕ ಎಸ್.ಎನ್. ಚೆನ್ನಬಸಪ್ಪ ಅವರು ಮಾತನಾಡಿ, ಪ್ರಸ್ತುತ ನೌಕರರು ನೀಡಿರುವ ಮನವಿಯಂತೆ ಸರ್ಕಾರಿ ನೌಕರರ ಅಗತ್ಯ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ನೌಕರ ಸಂಘದ ವಿಭಾಗಿಯ ಉಪಾಧ್ಯಕ್ಷ ಆರ್. ಮೋಹನ್ ಕುಮಾರ್, ಜಿಲ್ಲಾ ಸಂಘದ ಕಾರ್ಯದರ್ಶಿ ಕೃಷ್ಣಮೂರ್ತಿ, ಪಾಪಣ್ಣ, ನರಸಿಂಹಮೂರ್ತಿ, ಪ್ರಸನ್ನ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.