ಬೆಳಗಾವಿ : ಬರದಿಂದ ತತ್ತರಿಸಿರುವ ರೈತರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಈಗಾಗಲೇ ಘೋಷಿಸಿರುವ 2,000 ರೂ. ವರೆಗಿನ ಮೊದಲ ಹಂತದ ಪರಿಹಾರವನ್ನು ಮುಂದಿನ ವಾರದೊಳಗೆ ರೈತರ ಖಾತೆಗೆ ಜಮಾ ಮಾಡುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರೈತರಿಗೆ ಮೊದಲ ಹಂತದಲ್ಲಿ 2,000 ರೂ. ವರೆಗೆ ನೀಡಲು ಘೋಷಿಸಿರುವ ಪರಿಹಾರವನ್ನು ತ್ವರಿತವಾಗಿ ವಿತರಿಸಲು ಮಾರ್ಗಸೂಚಿಗಳನ್ನು ರೂಪಿಸಿ ಡಿಬಿಟಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಕಾರಣಕ್ಕೆ ಬೆಳೆ ನಾಶದಿಂದ ಸಂಕಷ್ಟಕ್ಕೆ ಒಳಗಾಗಿರುವ ರೈತರಿಗೆ ಈಗಾಗಲೇ ಸರ್ಕಾರ ಘೋಷಿಸಿರುವ ಎರಡು ಸಾವಿರ ರೂ. ವರೆಗಿನ ಮೊದಲ ಹಂತದ ಪರಿಹಾರವನ್ನು ಮುಂದಿನ ವಾರದೊಳಗೆ ವಿತರಿಸಲು ಕ್ರಮ ಕೈಗೊಳ್ಳಬೇಕು.
ರಾಜ್ಯದಲ್ಲಿ ತಲೆದೋರಿರುವ ತೀವ್ರ ಬರಪರಿಸ್ಥಿತಿಯ ಹಿನ್ನೆಲೆಯಲ್ಲಿ ಅಧಿಕಾರಿಗಳು ಯುದ್ಧೋಪಾದಿಯಲ್ಲಿ ಕೆಲಸ ಮುಂದುವರೆಸಬೇಕು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಜಿಲ್ಲೆಗಳಿಗೆ ಭೇಟಿ ನೀಡಿರುವ, ಪರಿಶೀಲನೆ ನಡೆಸಿರುವ ಕುರಿತಾದ ಸಮಗ್ರ ಮಾಹಿತಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ಅಂಕಿ-ಅಂಶಗಳ ಸಹಿತ ಒದಗಿಸಬೇಕು.
ರೈತರಿಗೆ ಮೊದಲ ಹಂತದಲ್ಲಿ 2,000 ರೂ. ವರೆಗೆ ಪರಿಹಾರ ಘೋಷಿಸಲಾಗಿದ್ದು, ಈ ಪರಿಹಾರವನ್ನು ತ್ವರಿತವಾಗಿ ವಿತರಿಸಲು ಮಾರ್ಗಸೂಚಿಗಳನ್ನು ರೂಪಿಸಿ, ಡಿ.ಬಿ.ಟಿ. ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಸರ್ಕಾರ ಸಮರ್ಪಕವಾಗಿ ನಡೆಯಲು ಅಧಿಕಾರಿಗಳ ಪಾತ್ರ ಬಹುಮುಖ್ಯ. ನೀವು ಸರ್ಕಾರದ ಕಣ್ಣು, ಕಿವಿ ಇದ್ದಹಾಗೆ. ರಾಜಕಾರಣಿಗಳು, ಅಧಿಕಾರಿಗಳು ನಾವೆಲ್ಲರೂ ಜನರಿಗೋಸ್ಕರ ಇರುವುದು. ಜನರ ಕೆಲಸವನ್ನು ವೇಗವಾಗಿ ಮಾಡಬೇಕು ಎಂದು ಹೇಳಿದ್ದಾರೆ.
ಆಯವ್ಯಯ ಭಾಷಣದಲ್ಲಿ 143 ಘೋಷಣೆಗಳನ್ನು ಮಾಡಲಾಗಿದ್ದು, ಇದರಲ್ಲಿ ಈಗಾಗಲೇ 83 ಘೋಷಣೆಗಳಿಗೆ ಸರ್ಕಾರಿ ಆದೇಶ ಹೊರಡಿಸಿ, ಕಾರ್ಯಗತಗೊಳಿಸಲಾಗಿದೆ. ಉಳಿದ ಘೋಷಣೆಗಳನ್ನೂ ಶೀಘ್ರವೇ ಅನುಷ್ಠಾನಕ್ಕೆ ತರಲು ಕ್ರಮ ಕೈಗೊಳ್ಳಬೇಕು ಸೂಚನೆ ನೀಡಿದ್ದಾರೆ.
ಗ್ಯಾರಂಟಿ ಯೋಜನೆಗಳಲ್ಲಿ ನೋಂದಾಯಿಸಿಕೊಂಡು ಇನ್ನೂ ಸೌಲಭ್ಯ ದೊರಕದ ಅರ್ಹ ಕೆಲವು ಫಲಾನುಭವಿಗಳಿಗೆ ಸೌಲಭ್ಯ ದೊರಕಲು ಇರುವ ತಾಂತ್ರಿಕ ಅಡಚಣೆಗಳನ್ನು ಶೀರ್ಘವೇ ನಿವಾರಿಸಬೇಕು. ಅಧಿವೇಶನ ನಡೆಯುವ ಸಂದರ್ಭದಲ್ಲಿ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿದ್ದು, ಸಚಿವರಿಗೆ ಸೂಕ್ತ ಮಾಹಿತಿ ನೀಡಬೇಕು ಎಂದು ಹೇಳಿದ್ದಾರೆ.
ಇಲಾಖೆಗಳಲ್ಲಿ ಕಡತಗಳ ವಿಲೇವಾರಿ ಸಮರ್ಪಕವಾಗಿ ನಡೆಯಬೇಕು. ಸಚಿವ ಸಂಪುಟ ಸಭೆಯಲ್ಲಿಯೂ ಬಾಕಿ ಕಡತಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಲಾಗುವುದು. ವಿವಿಧ ಇಲಾಖೆಗಳಲ್ಲಿ ನ್ಯಾಯಾಲಯ ಉಲ್ಲಂಘನೆಯ ಪ್ರಕರಣಗಳನ್ನು ಅಡ್ವೊಕೇಟ್ ಜನರಲ್ ಜೊತೆ ಚರ್ಚಿಸಿ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಬೇಕು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು ಜನಸಂಪರ್ಕ ಸಭೆ ನಡೆಸುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು. ಅನಿವಾರ್ಯ ಸಂದರ್ಭಗಳನ್ನು ಹೊರತು ಪಡಿಸಿ, ಕಡತಗಳಲ್ಲಿ ಕನ್ನಡದಲ್ಲಿಯೇ ಟಿಪ್ಪಣಿ ಬರೆಯಬೇಕು. ಕನ್ನಡ ನಮ್ಮ ರಾಜ್ಯ ಭಾಷೆ, ಸಾರ್ವಭೌಮ ಭಾಷೆ ಎಂದು ಹೇಳಿದ್ದಾರೆ.
ತೆರಿಗೆ ಸಂಗ್ರಹ ಇಲಾಖೆಗಳು ಇನ್ನಷ್ಟು ಚುರುಕಾಗಿ ಕಾರ್ಯನಿರ್ವಹಿಸಬೇಕು. ಜೊತೆಗೆ ತೆರಿಗೆಯೇತರ ರಾಜಸ್ವ ಸಂಗ್ರಹ ಹೆಚ್ಚಳ ಮಾಡುವ ಬಗ್ಗೆ ಆಡಳಿತ ಸುಧಾರಣಾ ಆಯೋಗ-2 ಮಾಡಿರುವ ಶಿಫಾರಸುಗಳನ್ನು ಎಲ್ಲ ಕಾರ್ಯದರ್ಶಿಗಳು ಅಧ್ಯಯನ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ.