ಕಲಬುರಗಿ : ಕಳೆದ 2022-23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ನೈಸರ್ಗಿಕ ವಿಕೋಪದಿಂದ ಹಾಳಾದ ಬೆಳೆಗಳ ವಿಮೆ ಮೊತ್ತ ಪಾವತಿಗೆ ಬಾಕಿ ಇದ್ದ 2,579 ರೈತರಿಗೆ 8,84,97,607 ರೂ. ವಿಮೆ ಮೊತ್ತ ಬಿಡುಗಡೆ ಮಾಡಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ ತಿಳಿಸಿದ್ದಾರೆ.
ಕಳೆದ ವರ್ಷ ವಿಕೋಪದಿಂದ ಬೆಳೆ ಹಾಳಾಗಿ ಕೃಷಿ ವಿಮೆ ಮಾಡಿಸಿದ 19,047 ರೈತರುಗಳ ದೂರಿನಂತೆ 9.59 ಕೋಟಿ ಹಣ ಜಮೆ ಮಾಡಲಾಗಿತ್ತು. ಉಳಿದ 2,579 ರೈತರು ತಡವಾಗಿ ನೊಂದಾಯಿಸಿದ ಕಾರಣ ಅದು ಅಕ್ಷೇಪಣೆ ಹಂತದಲ್ಲಿತ್ತು.
ಇದೀಗ ಸದರಿ ಆಕ್ಷೇಪಣೆ ವಿಲೇವಾರಿಗೊಳಿಸಿರುವ ಯುನಿವರ್ಸಲ್ ಸೋಂಪೋ ಜನರಲ್ ಇನ್ಶುರೆನ್ಸ್ ಕಂಪನಿ ಜಿಲ್ಲೆಯ ಅಫಜಲಪೂರ ತಾಲೂಕಿನ ಮಾಶ್ಯಾಳ, ಆಳಂದ ತಾಲೂಕಿನ ಕಿಣ್ಣಿಸುಲ್ತಾನ, ಕೊಡ್ಲಹಂಗರಗಾ ಹಾಗೂ ಕಲಬುರಗಿ ತಾಲೂಕಿನ ಬಸವ ಪಟ್ಟಣ ಗ್ರಾಮದ 2,579 ರೈತರಿಗೆ 8.84 ಕೋಟಿ ರೂ. ಬಿಡುಗಡೆ ಮಾಡಿದೆ.
ಇದರಿಂದ ಕಳೆದ 2022-23 ನೇ ಸಾಲಿಗೆ ಒಟ್ಟಾರೆ ಜಿಲ್ಲೆಯ 21,626 ರೈತರಿಗೆ 18,44,95,118 ರೂ. ಬೆಳೆ ವಿಮೆ ಪರಿಹಾರ ದೊರಕಿದಂತಾಗಿದೆ ಎಂದು ಅವರು ತಿಳಿಸಿದ್ದಾರೆ.