ಮುಟ್ಟಿನ ಬಗ್ಗೆ ಸಮಾಜದಲ್ಲಿ ಅನೇಕ ವದಂತಿಗಳಿವೆ. ಅನೇಕರು ಮುಟ್ಟನ್ನು ಅಶುದ್ಧವೆಂದು ಪರಿಗಣಿಸುತ್ತಾರೆ. ಆಧಾರವಿಲ್ಲದ ಅನೇಕ ಸಂಗತಿಗಳನ್ನು ಜನರು ಮಾತನಾಡ್ತಾರೆ. ಮೊದಲ ಬಾರಿ ಮುಟ್ಟಾದ ಹುಡುಗಿಯರಿಗೆ ಯಾವುದು ಸರಿ, ಯಾವುದು ತಪ್ಪು ಎಂಬ ಪ್ರಶ್ನೆ, ಗೊಂದಲ ಕಾಡುವುದು ಸಾಮಾನ್ಯ. ಹಾಗಾಗಿ ಪ್ರತಿಯೊಬ್ಬ ಹುಡುಗಿ ಮುಟ್ಟಿನ ಬಗ್ಗೆ ಸರಿಯಾದ ಮಾಹಿತಿ ತಿಳಿದಿರಬೇಕಾಗುತ್ತದೆ.
ಮುಟ್ಟಿನ ಸಂದರ್ಭದಲ್ಲಿ ಮನೆಯಿಂದ ಹೊರಗಿರಬೇಕು, ದೇವರ ಮನೆ ಪ್ರವೇಶ ಮಾಡಬಾರದು, ಉಪ್ಪಿನ ಕಾಯಿ ಮುಟ್ಟಬಾರದು ಹೀಗೆ ಅನೇಕ ಪದ್ಧತಿಗಳು ಇನ್ನೂ ಜಾರಿಯಲ್ಲಿವೆ. ಮುಟ್ಟಿನ ವೇಳೆ ಉಪ್ಪಿನ ಕಾಯಿ ಮುಟ್ಟಿದ್ರೆ ಅದು ಹಾಳಾಗುತ್ತದೆ ಎಂಬುದು ಸಂಪೂರ್ಣ ಸುಳ್ಳು. ಇದು ತಪ್ಪು ನಂಬಿಕೆ. ಒದ್ದೆಯಾದ ಕೈಗಳಿಂದ ಮುಟ್ಟಿದ್ರೆ ಅಥವ ನೀರು ಸಿಡಿಸಿದ್ರೆ ಮಾತ್ರ ಉಪ್ಪಿನಕಾಯಿ ಹಾಳಾಗುತ್ತದೆ.
ಮುಟ್ಟಿನ ವೇಳೆ ಮಹಿಳೆಯರು ಗರ್ಭ ಧರಿಸುವುದಿಲ್ಲವೆಂಬ ನಂಬಿಕೆ ಕೂಡ ಇದೆ. ಇದೇ ಕಾರಣಕ್ಕೆ ಕೆಲವರು ಯಾವುದೇ ಸುರಕ್ಷತೆಯಿಲ್ಲದೆ ಮುಟ್ಟಿನ ವೇಳೆ ಸಂಬಂಧ ಬೆಳೆಸುತ್ತಾರೆ. ಆದ್ರೆ ಇದು ಸುಳ್ಳು. ಮುಟ್ಟಿನ ಸಂದರ್ಭದಲ್ಲೂ ಶಾರೀರಿಕ ಸಂಬಂಧ ಬೆಳೆಸಿದ್ರೆ ಗರ್ಭ ಧರಿಸುವ ಸಾಧ್ಯತೆಯಿರುತ್ತದೆ.
ಪ್ರತಿ ದಿನ ವ್ಯಾಯಾಮ ಮಾಡುವ ಅಭ್ಯಾಸವುಳ್ಳ ಮಹಿಳೆ ಮುಟ್ಟಿನ ಸಂದರ್ಭದಲ್ಲೂ ಇದನ್ನು ಮುಂದುವರಿಸಬಹುದು. ಇದ್ರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ಬದಲಾಗಿ ಲಾಭವಾಗುತ್ತದೆ. ನೋವು ಕಡಿಮೆಯಾಗುತ್ತದೆ.
ಪಿರಿಯಡ್ ಮಿಸ್ ಆದ್ರೆ ಗರ್ಭಿಣಿ ಎಂದರ್ಥವಲ್ಲ. ಒತ್ತಡ, ಕಳಪೆ ಆಹಾರ, ಹಾರ್ಮೋನ್ ಬದಲಾವಣೆಗಳಿಂದಲೂ ಮುಟ್ಟಿನ ದಿನದಲ್ಲಿ ಬದಲಾವಣೆಯಾಗಬಹುದು.