ಮುಂಬೈ: ಬಿಡುಗಡೆಗೂ ಮುನ್ನವೇ ಬಾಲಿವುಡ್ ನ ಗದರ್-2 ಸಿನಿಮಾ ಭಾರಿ ಸದ್ದು ಮಾಡುತ್ತಿದೆ. ಸನ್ನಿ ಡಿಯೋಲ್ ಮುಖ್ಯ ಪಾತ್ರಾಭಿನಯದ ಚಿತ್ರವು ಈಗಾಗಲೇ ಆರ್‌ಆರ್‌ಆರ್, ದೃಶ್ಯಂ-2 ಮತ್ತು ಭೂಲ್ ಭುಲೈಯಾ-2 ರಂತಹ ಚಿತ್ರಗಳನ್ನು ಹಿಂದಿಕ್ಕಿದೆ. ಬಿಡುಗಡೆಗೆ ಇನ್ನೂ ಒಂದು ದಿನ ಮತ್ತು ಕೆಲವು ಗಂಟೆಗಳು ಮಾತ್ರ ಬಾಕಿ ಉಳಿದಿದ್ದು, ಟಿಕೆಟ್ ಗಳು ಸೋಲ್ಡ್ ಔಟ್ ಆಗಿದೆ.
ಗದರ್-2 ಚಲನಚಿತ್ರವು ಆಗಸ್ಟ್ 9, ಬುಧವಾರದಂದು ಸಂಜೆ 5 ಗಂಟೆಗೆ ಸುಮಾರು 1.25 ಲಕ್ಷ ಟಿಕೆಟ್‌ಗಳನ್ನು ಪಿವಿಆರ್, ಐನಾಕ್ಸ್ ಮತ್ತು ಸಿನಿಪೊಲಿಸ್ ನಲ್ಲಿ ಮಾರಾಟ ಮಾಡಿದೆ ಎಂದು ಹೇಳಲಾಗಿದೆ.
ಗದರ್-2 ಬಾಕ್ಸ್ ಆಫೀಸ್ ಕಲೆಕ್ಷನ್ ಮೊದಲ ದಿನದ ಭವಿಷ್ಯ: ರೂ.20 ಕೋಟಿ ಓಪನಿಂಗ್?
ಗದರ್-2 ತನ್ನ ಆರಂಭಿಕ ದಿನದಲ್ಲಿ ಕೇವಲ ಎರಡಂಕಿಗಳಲ್ಲಿ ಗಳಿಸುವುದಿಲ್ಲ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದರು. ಆದರೆ, ಇದು ಮೊದಲ ದಿನದಲ್ಲಿಯೇ ಸುಮಾರು 20 ಕೋಟಿ ರೂ. ಗಳಿಸಲಿದೆ ಎಂದು ಹೇಳಲಾಗಿದೆ. ಉತ್ತರದಲ್ಲಿ OMG-2 ಮತ್ತು ದಕ್ಷಿಣ ಭಾರತದಲ್ಲಿ ರಜನಿಕಾಂತ್‌ನ ಜೈಲರ್ ಮತ್ತು ಚಿರಂಜೀವಿಯ ಭೋಲಾ ಶಂಕರ್‌ನೊಂದಿಗೆ ಈ ಚಿತ್ರ ಪೈಪೋಟಿಗಿಳಿದಿದೆ.
ಇನ್ನು ವರದಿಯ ಪ್ರಕಾರ, ಗದರ್-2 ಆಗಸ್ಟ್ 10 ರ ಗುರುವಾರದ ಅಂತ್ಯದ ವೇಳೆಗೆ 2 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳನ್ನು ಮಾರಾಟ ಮಾಡುವ ನಿರೀಕ್ಷೆಯಿದೆ. ಪ್ರಸ್ತುತ ಮುಂಗಡ ಮಾರಾಟದಲ್ಲಿ, ಪಿವಿಆರ್ 53000 ಟಿಕೆಟ್‌ಗಳೊಂದಿಗೆ, ಐನಾಕ್ಸ್ 43000 ಮತ್ತು ಸಿನೆಪೊಲಿಸ್ 29000 ಟಿಕೆಟ್‌ಗಳೊಂದಿಗೆ ಮುಂಚೂಣಿಯಲ್ಲಿದೆ. ಸದ್ಯ, ಸಿನಿಮಾ ಭಾರಿ ನಿರೀಕ್ಷೆ ಹುಟ್ಟುಹಾಕಿದ್ದಂತೂ ಸುಳ್ಳಲ್ಲ.