ಸೋಮವಾರ ರಾತ್ರಿ ನಡೆದ ಐಪಿಎಲ್ ಫೈನಲ್ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳನ್ನು ಕೊನೆಯ ಕ್ಷಣದವರೆಗೂ ತುದಿಗಾಲಿನಲ್ಲಿ ನಿಲ್ಲಿಸಿತ್ತು. ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿದ ಚೆನ್ನೈ ಐದನೇ ಬಾರಿಗೆ ಐಪಿಲ್ ಮುಕುಟ ಧರಿಸಿದೆ.
ಈ ಪಂದ್ಯದ ಸಂದರ್ಭ ಹಾಗೂ ನಂತರದ ವೇಳೆಯಲ್ಲಿ ಜನರು ಏನೆಲ್ಲಾ ಪದಾರ್ಥಗಳನ್ನು ಹೆಚ್ಚು ಆರ್ಡರ್ ಮಾಡಿದ್ದಾರೆ ಎಂದು ಫುಡ್ ಡೆಲಿವರಿ ದೈತ್ಯ ಸ್ವಿಗ್ಗಿ ಪಟ್ಟಿ ಮಾಡಿ ಸಾರ್ವಜನಿಕಗೊಳಿಸಿದೆ. ಒಳ್ಳೆಯ ಶಕುನ ಬರಲಿ ಎಂದು ಮೊಸರು – ಸಕ್ಕರೆ ಹಿಡಿದು ರುಚಿಕರವಾದ ಬಿರಿಯಾನಿವರೆಗೂ ಆರ್ಡರ್ ಮಾಡಿರುವ ಜನರು ಸ್ವಿಗ್ಗಿ ಡೆಲಿವರಿ ಸಿಬ್ಬಂದಿಗೆ ಸುದೀರ್ಘ ಕಾಲ ಭಾರೀ ಶ್ರಮ ಕೊಟ್ಟಿದ್ದಾರೆ.
ಪ್ರಸಕ್ತ ಐಪಿಎಲ್ ಋತುವಿನ ವೇಳೆ ತನಗೆ ಒಟ್ಟಾರೆ 12 ದಶಲಕ್ಷ ಬಿರಿಯಾನಿಗೆ ಆರ್ಡರ್ ಬಂದಿದ್ದು, ಪ್ರತಿ ನಿಮಿಷಕ್ಕೆ 212 ಬಿರಿಯಾನಿಗಳು ಡೆಲಿವರಿ ಆಗಿವೆ ಎಂದು ಸ್ವಿಗ್ಗಿ ತಿಳಿಸಿದೆ.
ಇದೇ ವೇಳೆ 2423 ಕಾಂಡೋಮ್‌ಗಳನ್ನು ತನ್ನ ಇನ್ಸ್‌ಟಾಮಾರ್ಟ್ ತಂಡ ಡೆಲಿವರಿ ಮಾಡಿರುವುದಾಗಿ ತಿಳಿಸಿದೆ ಸ್ವಿಗ್ಗಿ.
ಇದೆಲ್ಲಕ್ಕಿಂತ ಆಸಕ್ತಿಕರ ವಿಚಾರವೊಂದನ್ನು ಸ್ವಿಗ್ಗಿ ಹಂಚಿಕೊಂಡಿದೆ. ತನ್ನ ಊರಿನ ಐಪಿಎಲ್ ತಂಡಕ್ಕೆ ಚೆನ್ನೈ ಅದೆಷ್ಟರ ಮಟ್ಟಿಗೆ ಭಾವನಾತ್ಮಕ ಬೆಂಬಲಕ್ಕೆ ನಿಂತಿದೆ ಎಂದು ಇದು ತೋರುತ್ತದೆ. ಸ್ವಿಗ್ಗಿ ಇನ್ಸ್ಟಾಮಾರ್ಟ್‌ನಲ್ಲಿ ಈ ಪಂದ್ಯದ ಅವಧಿಯಲ್ಲಿ ಚೆನ್ನೈನಲ್ಲಿ 3,641 ಮೊಸರು ಪ್ಯಾಕೆಟ್ ಹಾಗೂ 720 ಸಕ್ಕರೆಯ ಆರ್ಡರ್‌ಗಳು ಬಂದಿವೆ.
ಪಂದ್ಯದ ವೇಳೆ ಭಾರೀ ಮಳೆ ಬಂದು ತೇವಗೊಂಡಿದ್ದ ಮೈದಾನವನ್ನು ಒಣಗಿಸಲು ಕ್ರೀಡಾಂಗಣದ ಸಿಬ್ಬಂದಿ ಹಾಕಿದ ಶ್ರಮವೂ ಸಹ ಭಾರೀ ಸುದ್ದಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಒಳ್ಳೆಯ ಕಂಟೆಂಟ್ ಆಗಿದೆ. ಈ ವಿಚಾರವನ್ನೂ ಸಹ ವಿಡಂಬನಾತ್ಮಕವಾಗಿ ಟ್ವೀಟ್ ಮಾಡಿರುವ ಸ್ವಿಗ್ಗಿ, ಪಿಚ್ ಒಣಗಿಸಲು ಬೇಕಾದ ಸಾಮಗ್ರಿಗಳನ್ನು ಅಹಮದಾಬಾದ್‌ಗೆ ಡೆಲಿವರಿ ಮಾಡುತ್ತಿದ್ದೇವೆ ಎಂದು ಟ್ವೀಟ್ ಮಾಡಿಕೊಂಡಿದೆ.