ಬೆಂಗಳೂರು: ಇಲ್ಲೋರ್ವ ವ್ಯಕ್ತಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬರೋಬ್ಬರಿ 20 ಕೋಟಿ ಸಾಲ ಪಡೆದು ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಖಾಲಿ ನಿವೇಶನ, ಮನೆಗಳು, ಫ್ಲ್ಯಾಟ್ ಗಳ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್ ಗಳಿಂದ ಸಾಲ ಪಡೆಯುತ್ತಿದ್ದ ಆಸಾಮಿ, ಯಾರದ್ದೋ ಜಾಗವನ್ನು ತನ್ನದೆಂದು ಹೇಳಿ ವಂಚಿಸುತ್ತಿದ್ದ.
ಆರೋಪಿಯನ್ನು ಶೇಷಾದ್ರಿಪುರಂ ಪೊಲೀಸರು ಬಂಧಿಸಿದ್ದು, ಲಗ್ಗೆರೆ ನಿವಾಸಿ ಕೃಷ್ಣ ಕುಮಾರ್ ಬಂಧಿತ ಆರೋಪಿ. ಅಸಲಿ ಹೆಸರು ಮರೆಮಾಚಿ ನಕಲಿ ಹೆಸರಿನಲ್ಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದ. ಬಳಿಕ ಬ್ಯಾಂಕ್ ಗಳಿಗೆ ಸಾಲಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದ. ಅರ್ಜಿ ವೇಳೆ ಬಾಡಿಗೆ ಮನೆ ವಿಳಾಸ ನೀಡುತ್ತಿದ್ದ.
ದಾಖಲೆಗಳನ್ನು ನೋಡಿ ಬ್ಯಾಂಕ್ ಗಳು ಈವರೆಗೆ 20 ಕೋಟಿ ಸಾಲ ನೀಡಿವೆ ಎಂದು ತಿಳಿದುಬಂದಿದೆ. ಬಳಿಕ ತಿಂಗಳ ಕಂತು ತುಂಬದೇ ಬಾಡಿಗೆ ಮನೆಯನ್ನು ಖಾಲಿ ಮಾಡಿ ಆರೋಪಿ ಎಸ್ಕೇಪ್ ಆಗುತ್ತಿದ್ದ. ಆರೋಪಿ ಕೃಷ್ಣ ಕುಮಾರ್ ವಿರುದ್ಧ ವಿವಿಧ ಠಾಣೆಗಳಲ್ಲಿ 9 ಪ್ರಕರಣಗಳು ದಾಖಲಾಗಿದ್ದವು. ಇದೀಗ ಶೇಷಾದ್ರಿಪುರಂ ಪೊಲಿಸರು ಖತರ್ನಾಕ್ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.