ಬೆಂಗಳೂರು: ಬೀದಿ ಬದಿ ವ್ಯಾಪಾರಿಗಳನ್ನು ತೆರವು ಮಾಡಿರುವುದನ್ನು ಖಂಡಿಸಿ ಬೆಂಗಳೂರಿನ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಬಳಿ ಬೀದಿ ಬದಿ ವ್ಯಾಪಾರಿಗಳು ಪ್ರತಿಭಟನೆ ನಡೆಸುತ್ತಿದ್ದು, ಮಕರ ಸಂಕ್ರಮಣದ ಸಂದರ್ಭದಲ್ಲಿ ನಮ್ಮ ಹೊಟ್ಟೆಯ ಮೇಲೆ ಹೊಡೆಯಬೇಡಿ ಎಂದು ಕಣ್ಣೀರಿಟ್ಟಿದ್ದಾರೆ.
ಬೀದಿ ಬದಿ ವ್ಯಾಪಾರಿಗಳ ಪ್ರತಿಭಟನೆಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಬೀದಿ ಬದಿ ವ್ಯಾಪಾರಿಗಳ ಸಮಸ್ಯೆಗಳ ಬಗ್ಗೆ ನಮ್ಮ ಗಮನ ಇದೆ. ನನ್ನನ್ನೂ ಭೇಟಿಯಾಗಿ ಹಲವು ಬಾರಿ ಸಮಸ್ಯೆ ತೋಡಿಕೊಂಡಿದ್ದಾರೆ. ಆದರೆ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಸರಿಪಡಿಸಬೇಕಿದೆ. ಫುಟ್ ಪಾತ್ ಗಳು ಜನರ ಓಡಾಟಕ್ಕೆ ಮುಕ್ತವಾಗಿರಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ. ಅದನ್ನು ಪಾಲಿಸಲೇಬೇಕು ಎಂದರು.
ಬೀದಿ ಬದಿ ವ್ಯಾಪಾರಿಗಳು ಲೈಸನ್ಸ್ ಪಡೆದುಕೊಳ್ಳಲಿ. ಬಳಿಕ ಜನರ ಓಡಾಟಕ್ಕೆ ತೊಂದರೆ ಆಗದಂತೆ ತಳ್ಳುಗಾಡಿ ಹಾಕಿಕೊಂಡು ವ್ಯಾಪಾರ ಮಾಡಿದರೆ ಯಾವುದೇ ಸಮಸ್ಯೆಯಾಗಲ್ಲ ಎಂದು ಹೇಳಿದರು.
ಫುಟ್ ಪಾತ್ ಮೇಲೆ ವ್ಯಾಪಾರ ಮಾಡಿದರೆ ಜನರ ಓಡಾಟಕ್ಕೆ ತೊಂದರೆ ಆಗುತ್ತದೆ ಎಂಬ ದೂರುಗಳು ಬಂದಿವೆ. ಹಾಗಾಗಿ ಕೋರ್ಟ್ ನಿರ್ದೇಶನ ಮೇರೆಗೆ ತೆರವು ಮಾಡಲಾಗಿದೆ ಎಂದು ಹೇಳಿದರು.