ಸ್ವಾಭಾನಿಕ ಸಂಪನ್ಮೂಲಗಳ ನ್ಯಾಯಯುತ ಬಳಕೆಯ ಮಹತ್ವವನ್ನು ಸಾರುವ ಭೂಮಿ ದಿನವನ್ನು ಏಪ್ರಿಲ್ 22ರಂದು ಆಚರಿಸಲಾಗುತ್ತದೆ. ಇತ್ತೀಚಿಗೆ ಪ್ರಕಟಗೊಂಡ ವೈಜ್ಞಾನಿಕ ಅಧ್ಯಯನದ ವರದಿಯೊಂದು ಆಹಾರ ತ್ಯಾಜ್ಯ ಹಾಗೂ ನಿರ್ವಹಣೆಯ ಕುರಿತು ಮಹತ್ವದ ಸಂಗತಿಗಳನ್ನು ಬಯಲು ಮಾಡಿದೆ.
ಜಾಗತಿಕವಾಗಿ ಉತ್ಪಾದನೆಯಾಗುವ ಆಹಾರದ 40%ನಷ್ಟು ವ್ಯರ್ಥವಾಗುತ್ತಿದೆ ಎಂದು ಡಬ್ಲ್ಯೂಡಬ್ಲ್ಯೂಎಫ್ ಹಾಗೂ ಟೆಸ್ಕೋ 2021ರ ಜುಲೈನಲ್ಲಿ ನಡೆಸಿದ್ದ ಅಧ್ಯಯನವೊಂದು ತಿಳಿಸಿದೆ. ಈ ಮಟ್ಟದ ತ್ಯಾಜ್ಯವು ಸೃಷ್ಟಿಸುವ ಪರಿಸರ ಅಸಮತೋಲನಗಳ ಕುರಿತು ಚೀನಾದ ನಾನ್‌ಜಿಂಗ್ ಫಾರೆಸ್ಟ್ರಿ ವಿವಿ ಹಾಗೂ ಸಿಂಗಾಪುರದ ರಾಷ್ಟ್ರೀಯ ವಿವಿಗಳು ಅಧ್ಯಯನ ನಡೆಸಿವೆ.
ಜಾಗತಿಕ ಆಹಾರ ವ್ಯವಸ್ಥೆಯು ಒಟ್ಟಾರೆ ವಾರ್ಷಿಕ ಹಸಿರುಮನೆ ಅನಿಲಗಳ ಹೊರಸೂಸುವಿಕೆಯ ಮೂರನೇ ಒಂದು ಭಾಗದಷ್ಟು ಪಾಲು ಹೊಂದಿವೆ. ಒಟ್ಟಾರೆಯಾಗಿ ಆಹಾರದ ತ್ಯಾಜ್ಯವು ವಾರ್ಷಿಕ 9.3 ಶತಕೋಟಿ ಟನ್‌ಗಳಷ್ಟು ಇಂಗಾಲದ ಡೈ ಆಕ್ಸೈಡ್ ಉತ್ಪಾದಿಸುತ್ತಿದೆ ಎಂಧು ’ನೇಚರ್ ಫುಡ್’ ಎಂಬ ನಿಯತಕಾಲಿಕೆ ವರದಿ ಮಾಡಿದೆ. ಇದು ಅಮೆರಿಕ ಹಾಗೂ ಐರೋಪ್ಯ ಒಕ್ಕೂಟಗಳು ಉತ್ಪಾದಿಸುವ ಒಟ್ಟಾರೆ ಮಾಲಿನ್ಯದ ಪ್ರಮಾಣದಷ್ಟಿದೆ.
ಆಹಾರದ ಉದ್ಯಮದಿಂದ ಸೃಷ್ಟಿಯಾಗುತ್ತಿರುವ ಮಾಲಿನ್ಯದ ಅರ್ಧದಷ್ಟನ್ನು ಆಹಾರದ ತ್ಯಾಜ್ಯವೇ ಸೃಷ್ಟಿಸುತ್ತಿದೆ. ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ 2001ರಿಂದ 2017ರವರೆಗೆ ಸಂಗ್ರಹಿಸಿರುವ ಅಂಕಿಅಂಶಗಳನ್ನು ಸಹ ಅಧ್ಯಯನಕ್ಕೆ ಪರಿಗಣಿಸಲಾಗಿದೆ. ಚೀನಾ, ಭಾರತ, ಅಮೆರಿಕ, ಬ್ರೆಜ಼ಿಲ್ ದೇಶಗಳು ಜಾಗತಿಕವಾಗಿ ಉತ್ಪಾದನೆಯಾಗುತ್ತಿರುವ ಆಹಾರ ತ್ಯಾಜ್ಯದ 44%ನಷ್ಟನ್ನು ಉತ್ಪಾದಿಸುತ್ತಿವೆ ಎಂದು ಅಧ್ಯಯನದ ಮಾಹಿತಿ ತಿಳಿಸಿದೆ.
ಮಾಂಸ ಹಾಗೂ ಪ್ರಾಣಿಜನ್ಯ ಉತ್ಪನ್ನಗಳಿಂದಲೇ ಜಾಗತಿಕ ಆಹಾರ ಪೂರೈಕೆ ಕೊಂಡಿಯಿಂದ ಉತ್ಪಾದನೆಯಾಗುವ ತ್ಯಾಜ್ಯದ ಹೊರಸೂಸುವಿಕೆಯ 44%ನಷ್ಟು ಪಾಲಿದೆ. 2030 ರ ವೇಳೆಗೆ ಆಹಾರ ತ್ಯಾಜ್ಯವನ್ನು ಅರ್ಧದಷ್ಟಕ್ಕೆ ತಗ್ಗಿಸಲು ವಿಶ್ವ ಆರೋಗ್ಯ ಸಂಸ್ಥೆ ಗುರಿ ನಿಗದಿ ಮಾಡಿದೆ.