ಶಿವಮೊಗ್ಗ : ಆಗಸ್ಟ್ 11 ರಿಂದ ಶಿವಮೊಗ್ಗ ವಿಮಾನ ನಿಲ್ದಾಣ ಕಾರ್ಯಾರಂಭವಾಗಲಿದೆ ಎಂದು ಬೃಹತ್ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಂಬ್ಯುಲೆನ್ಸ್ ಮತ್ತು ಇತರ ವಾಹನಗಳ ಸೇವೆಗಳನ್ನು ಆರಂಭಿಸಲಾಗುವುದು. ಕೆಲವು ತಾಂತ್ರಿಕ ಮತ್ತು ತಾಂತ್ರಿಕೇತರ ಸಿಬ್ಬಂದಿಯನ್ನು ನೇಮಿಸಬೇಕಾಗಿದೆ, ಜುಲೈ 20 ರೊಳಗೆ ವಿಮಾನ ನಿಲ್ದಾಣವು ಕಾರ್ಯಾಚರಣೆಗೆ ಸಿದ್ಧವಾಗಲಿದೆ ಎಂದು ಹೇಳಿದರು. ಎಲ್ಲವೂ ಅಂದುಕೊಂಡಂತೆ ಆದರೆ ಆಗಸ್ಟ್ 11 ರಂದು ಬೆಂಗಳೂರಿನಿಂದ ಮೊದಲ ವಿಮಾನವು ಶಿವಮೊಗ್ಗಕ್ಕೆ ಇಳಿಯಲಿದೆ, ಐತಿಹಾಸಿಕ ಕ್ಷಣದಲ್ಲಿ ಪಾಲ್ಗೊಳ್ಳಲು ಜನಪ್ರತಿನಿಧಿಗಳು ಸೇರಿದಂತೆ ಎಲ್ಲರನ್ನು ಆಹ್ವಾನಿಸಲಾಗುತ್ತದೆ ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.
ಒಟ್ಟು 775 ಎಕರೆ ವಿಸ್ತೀರ್ಣದಲ್ಲಿ ರೂ. 449.22 ಕೋಟಿ ವೆಚ್ಚದಲ್ಲಿ ಎಟಿಆರ್ 72 ರಿಂದ ಏರ್ಬಸ್ 320 ರವರೆಗೆ ಎಲ್ಲ ರೀತಿಯ ವಿಮಾನಗಳು ಹಗಲು-ರಾತ್ರಿ ಕಾರ್ಯಾಚರಣೆಗೆ ಅನುಕೂಲವಾಗುವಂತೆ 3.2 ಕಿ.ಮೀ ರನ್ವೇ ಹಾಗೂ 4320 ಚದರ ಅಡಿ ವಿಸ್ತೀರ್ಣದ ಸುಸಜ್ಜಿತ ಪ್ಯಾಸೆಂಜರ್ ಟರ್ಮಿನಲ್, ಏರ್ ಟ್ರಾಫಿಕಿಂಗ್ ಸೆಂಟರ್ ಇತರೆ ಸೌಲಭ್ಯಗಳೊಂದಿಗೆ ನಿರ್ಮಿಸಿರುವ ವಿಮಾನ ನಿಲ್ದಾಣ ಇದಾಗಿದೆ. ಶಿವಮೊಗ್ಗದ ಸೋಗಾನೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ವಿಮಾನ ನಿಲ್ದಾಣವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಉದ್ಘಾಟನೆ ಮಾಡಿದ್ದರು.
ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವ ಎಂಬಿ ಪಾಟೀಲ್ ಬೆಂಗಳೂರಿನಲ್ಲಿ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದೆ. ರಾಜ್ಯ ಸರ್ಕಾರದಿಂದ ನಿರ್ವಹಣೆಯಾಗಲಿರುವ ಮೊಟ್ಟಮೊದಲ ವಿಮಾನ ನಿಲ್ದಾಣ ಶಿವಮೊಗ್ಗ ಏರ್ ಪೋರ್ಟನ್ನು ಜುಲೈ 20ರ ವೇಳೆಗೆ ಸಜ್ಜಗೊಳಿಸಿ, ಆಗಸ್ಟ್ 11ರಿಂದ ವಿಮಾನ ಹಾರಾಟ ಆರಂಭಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದೆ. ಇದೇವೇಳೆ ನಿರ್ಮಾಣ ಹಂತದಲ್ಲಿರುವ ವಿಜಯಪುರ, ಹಾಸನ, ರಾಯಚೂರು ಮತ್ತು ಕಾರವಾರ ವಿಮಾನ ನಿಲ್ದಾಣಗಳ ಪ್ರಗತಿಯ ಕುರಿತು ಚರ್ಚಿಸಿ, ಸೂಕ್ತ ನಿರ್ದೇಶನ ನೀಡಿರುವೆ. ಸಭೆಯಲ್ಲಿ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿಗಳಾದ ಶ್ರೀ ಗೌರವ್ ಗುಪ್ತ, #KSIIDC ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಎಂ.ಆರ್.ರವಿ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಪ್ರಕಾಶ್ ಉಪಸ್ಥಿತರಿದ್ದರು ಎಂದು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
#ಶಿವಮೊಗ್ಗ_ಏರ್_ಪೋರ್ಟ್ ಜುಲೈ 20ಕ್ಕೆ ಸಜ್ಜು!
ಬೆಂಗಳೂರಿನಲ್ಲಿ ಇಂದು ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದೆ. ರಾಜ್ಯ ಸರ್ಕಾರದಿಂದ ನಿರ್ವಹಣೆಯಾಗಲಿರುವ ಮೊಟ್ಟಮೊದಲ ವಿಮಾನ ನಿಲ್ದಾಣ #ಶಿವಮೊಗ್ಗ ಏರ್ ಪೋರ್ಟನ್ನು ಜುಲೈ 20ರ ವೇಳೆಗೆ ಸಜ್ಜಗೊಳಿಸಿ, ಆಗಸ್ಟ್ 11ರಿಂದ ವಿಮಾನ ಹಾರಾಟ ಆರಂಭಿಸಲು ಅಗತ್ಯ ಕ್ರಮಗಳನ್ನು… pic.twitter.com/nMHRtxCoS5
— M B Patil (@MBPatil) July 13, 2023