ಬೆಂಗಳೂರು: ಹೈಕೋರ್ಟ್ ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ಅವರ ಹೆಸರಲ್ಲಿ ವಕೀಲೆಯೊಬ್ಬರು ಕಕ್ಷಿದಾರರ ಬಳಿ 50 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿರುವ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಹೈಕೋರ್ಟ್ ನ ಜಂಟಿ ರಿಜಿಸ್ಟ್ರಾರ್ ಎಂ. ರಾಜೇಶ್ವರಿ ಅವರ ದೂರು ಆಧರಿಸಿ ವಕೀಲೆ ದಯೀನಾ ಬಾನು ವಿರುದ್ಧ ವಂಚನೆ ಮತ್ತು ಅಪ್ರಾಮಾಣಿಕತೆ ಆರೋಪದ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
2021ರಲ್ಲಿ ಬೈಯಪ್ಪನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ವಿ. ವಿಷ್ಣುದೇವನ್ ಅಲಿಯಾಸ್ ವಿಶು(27) 3 ವರ್ಷಗಳಿಂದ ಜೈಲಿನಲ್ಲಿದ್ದು, ಪುತ್ರನಿಗೆ ಜಾಮೀನು ಕೊಡಿಸಲು ವಿಷ್ಣು ತಾಯಿ ಥೆರೆಸಾ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಆರೋಪಿ ವಿಷ್ಣುಗೆ ವಿಚಾರಣಾ ನ್ಯಾಯಾಲಯ ಈ ನಡುವೆ ಜಾಮೀನು ತಿರಸ್ಕರಿಸಿದ್ದು, ಇದನ್ನು ಪ್ರಶ್ನಿಸಿ ಥೆರೆಸಾ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.
ವಕೀಲೆ ದಯೀನಾ ಬಾನು ಅವರು ವಕಾಲತ್ತು ವಹಿಸಿದ್ದಾರೆ. ಈ ಅರ್ಜಿ ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ಅವರ ಮುಂದೆ ವಿಚಾರಣಾ ಹಂತದಲ್ಲಿದೆ. ಸಂದೇಶ್ ಅವರು ವಿಷ್ಣುಗೆ ಜಾಮೀನು ನೀಡಲು 50 ಲಕ್ಷ ರೂ. ಕೇಳುತ್ತಿದ್ದಾರೆ. ಅಷ್ಟು ಹಣ ಕೊಡಲು ಸಾಧ್ಯವಾಗದಿದ್ದರೆ ಬೇರೆ ವಕೀಲರನ್ನು ನೇಮಿಸಿಕೊಳ್ಳಿ ಎಂದು ದಯೀನಾ ಬಾನು ಬೇಡಿಕೆ ಇಟ್ಟಿದ್ದಾರೆ ಎಂದು ಥೆರೆಸಾ ಅವರು ರಿಜಿಸ್ಟ್ರಾರ್ ಮತ್ತು ನ್ಯಾಯಮೂರ್ತಿಗಳಿಗೆ ದೂರು ನೀಡಿದ್ದರು.
ಈ ಮಾಹಿತಿ ತಿಳಿದ ನ್ಯಾಯಮೂರ್ತಿ ಸಂದೇಶ್ ಅವರು ವಕೀಲೆಯ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ರಿಜಿಸ್ಟ್ರಾರ್ ಗೆ ಸೂಚನೆ ನೀಡಿದ್ದು, ಅಂತೆಯೇ ಜಂಟಿ ರಿಜಿಸ್ಟ್ರಾರ್ ಎಂ. ರಾಜೇಶ್ವರಿ ದೂರು ದಾಖಲಿಸಿದ್ದಾರೆ.