ಬೆಂಗಳೂರು: ಫೆಂಗಲ್ ಚಂಡ ಮಾರುತ ಈಗಾಗಲೇ ತಮಿಳುನಾಡು, ಪುದುಚೆರಿಗೆ ಅಪ್ಪಳಿಸಿದ್ದು, ಎಂಟ್ರಿಯಾಗುತ್ತಿದ್ದಂತೆಯೇ ನಾಲ್ವರನ್ನು ಬಲಿ ಪಡೆದಿದೆ. ಚೆನ್ನೈನ ಹಲವು ನಗರಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಿಂದಾಗಿ ಅವಂತರಗಳು ಸೃಷ್ಟಿಯಾಗಿವೆ.
ಫೆಂಗಲ್ ಚಂಡಮಾರುತದ ಪರಿಣಾಮ ಕರ್ನಾಟಕ ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಕ್ಕೂ ತಟ್ಟಿದೆ. ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆಯಿಂದ ತುಂತುರು ಮಳೆಯಾಗುತ್ತಿದ್ದು, ಇಂದು ಮುಂಜಾನೆಯಿಂದಲೇ ಮಳೆ ಪ್ರಮಾಣ ಜೋರಾಗಿದೆ.
ದಟ್ಟವಾದ ಮೋಡಕವಿದ ವಾತಾವರಣದ ಜೊತೆ ಮಳೆಯಾಗುತ್ತಿದ್ದು, ಒಂದೆಡೆ ಮೈ ಕೊರೆವ ಚಳಿ ಕೂಡ ಜನರನ್ನು ಹರಾಣಾಗಿಸಿದೆ. ಚಂಡಮಾರುತದ ಪರಿಣಾಮ ಬೆಂಗಳೂರುನಲ್ಲಿ ಇನ್ನೂ ಮೂರು ದಿನಗಳ ಕಾಲ ಮಳೆ ಹಾಗೂ ಮೈಕೊರೆವ ಚಳಿ ಮುಂದುವರೆಯುವ ಸಾಧ್ಯತೆ ಇದೆ.
ಭಾರಿ ಚಳಿ, ಮೋಡ ಕವಿದ ವಾತಾವರಣ, ಮಳೆಯಿಂದಾಗಿ ನಗರದ ಜನರಲ್ಲಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಈಗಗಲೇ ಕೆಮ್ಮು-ಕಫ, ನೆಗಡಿ, ಜ್ವರದಂತಹ ಸಮಸ್ಯೆಗಳು ಕಾಡುತ್ತಿದ್ದು, ಹಲವರು ಅನಾರೋಗ್ಯಕ್ಕೀಡಾಗುತ್ತಿದ್ದಾರೆ. ಇದೇ ರೀತಿ ವಾತಾವರಣ ಮುಂದುವರೆದರೆ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆಯೂ ದಟ್ಟವಾಗಿದೆ.