
ಶಿವಮೊಗ್ಗ: ರೈತರು ಆಧುನಿಕ ತಂತ್ರಜ್ಞಾನದ ಸದುಪಯೋಗ ಪಡೆದುಕೊಂಡು ಕೃಷಿಯಲ್ಲಿ ಹೆಚ್ಚು ಪ್ರಗತಿ ಸಾಧಿಸಬೇಕು ಎಂದು ಬಸವ ಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.
ನಗರದ ನವುಲೆಯಲ್ಲಿರುವ ಕೃಷಿ ವಿಶ್ವವಿದ್ಯಾಲಯದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ವತಿಯಿಂದ ಆಯೋಜಿಸಿದ್ದ ರೋಟರಿ ಜಿಲ್ಲಾ ಕಾರ್ಯಕ್ರಮ, ಹಸಿರು ಮತ್ತು ನೀರು ಜಾಗೃತಿ ಉಪನ್ಯಾಸ, ಪ್ರಗತಿಪರ ರೈತರಿಗೆ ಸನ್ಮಾನ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ರೋಟರಿ ಸಂಸ್ಥೆಯು ಸೇವಾ ಕಾರ್ಯದ ಜತೆಯಲ್ಲಿ ಪರಿಸರ ಜಾಗೃತಿ, ರೈತರಿಗೆ ಉಪಯುಕ್ತ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ. ಆರ್.ಸಿ.ಜಗದೀಶ್, ರೈತರು ಸಮಗ್ರ ಕೃಷಿ ಪದ್ಧತಿ ತೊಡಗಿಸಿಕೊಂಡರೆ ಆರ್ಥಿಕವಾಗಿ ಸದೃಢರಾಗಲು ಸಾಧ್ಯವಿದೆ. ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಿದೆ ಎಂದರು.
ರೋಟರಿ ಜಿಲ್ಲಾ ಗವರ್ನರ್ ಸಿ.ಎ.ದೇವ್ ಆನಂದ್ ಮಾತನಾಡಿ, ಹಸಿರೇ ಉಸಿರು, ನಮಗೆ ಉಸಿರಾಡಲು ಗಿಡಮರಗಳು ಆಮ್ಲಜನಕ ಒದಗಿಸುತ್ತದೆ. ಹಸಿರನ್ನು ಕಾಪಾಡಿಕೊಳ್ಳುವಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ತಿಳಿಸಿದರು.
ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಮಾತನಾಡಿ, ಹಿಂದಿನ ಕಾಲದಲ್ಲಿ ರಾಸಾಯನಿಕ ಗೊಬ್ಬರ ಬಳಸದೆ ಬೆಳೆ ಬೆಳೆಯುತ್ತಿದ್ದರು. ರೈತರು ಸಾವಯವ ಕೃಷಿಯನ್ನು ಅವಲಂಬಿಸಬೇಕು ಎಂದು ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಜಿ.ಕಿರಣ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಲಯ11ರ ಸಹಾಯಕ ಗವರ್ನರ್ ಪ್ರೊ. ಹೆಚ್.ಎಂ.ಸುರೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಿಗೆ ಸನ್ಮಾನಿಸಲಾಯಿತು.
ಕೃಷಿ ಕಾಲೇಜಿನ ಡೀನ್ ಡಾ. ಡಿ.ತಿಪ್ಪೇಶ್ ನಾಯಕ್, ಕಾರ್ಯಕ್ರಮ ಸಂಯೋಜಕ ಎನ್.ರಮೇಶ್, ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಕಾರ್ಯದರ್ಶಿ ಬಿ.ವಿ.ಈಶ್ವರ್, ರವಿ ಕೋಟೋಜಿ, ವೀರೂಪಾಕ್ಷ, ಬಿ.ಎ.ಸಂತೋಷ್, ಜಿ.ಎನ್.ಪ್ರಕಾಶ್, ಧರ್ಮೇಂದ್ರ ಸಿಂಗ್, ಬಸವರಾಜ್, ಜಯಶೀಲ ಶೆಟ್ಟಿ, ವಿಶ್ವನಾಥ್, ರಾಜಶ್ರೀ ಬಸವರಾಜ್, ಗೀತಾ ಜಗದೀಶ್, ಶುಭ ಚಿದಾನಂದ್, ಹೆಚ್.ಎಲ್.ರವಿ, ಮಹಮ್ಮದ್ ಮುಸ್ತಾಕ್ ಹಾಗೂ ರೈತರು, ಕುಟುಂಬ ವರ್ಗದವರು, ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.